ಬಂಟ್ವಾಳ: ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಕಡೇಶಿವಾಲಯದ ನಿವಾಸಿಯಾದ ಹೇಮಂತ್ ಆಚಾರ್ಯ (21) ಅವರ ಮೃತದೇಹವು ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಜುಲೈ 27ರಂದು ನಾಪತ್ತೆಯಾದ ಹೇಮಂತ್ ಅವರ ಕುರಿತಂತೆ ಜುಲೈ 28ರಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಜುಲೈ 29ರಂದು ಜಕ್ರಿಬೆಟ್ಟು ಎಂಬಲ್ಲಿ ಅವರ ದ್ವಿಚಕ್ರ ವಾಹನ ಪತ್ತೆಯಾಗಿದ್ದು, ಅದರಲ್ಲಿ ಮೊಬೈಲ್ ಬಿಟ್ಟು ಹೋಗಿದ್ದರು ಎನ್ನಲಾಗಿದೆ.
ನೇತ್ರಾವತಿ ನದಿಯ ಬದಿಯಲ್ಲಿ ವಾಹನ ಇಟ್ಟಿದ್ದ ಹಿನ್ನೆಲೆ, ಶೋಧ ಕಾರ್ಯಾಚರಣೆ ಆರಂಭವಾಗಿತ್ತು.
ಜು.30ರಂದು ಅಗ್ನಿಶಾಮಕ ದಳ ಮತ್ತು ಪೊಲೀಸರು ಶೋಧ ನಡೆಸಿದರೂ ಸಿಗದೆ ಇದ್ದ ಸಂದರ್ಭದಲ್ಲಿ, ಜು.31ರಂದು ಗ್ರಾಮ ಪಂಚಾಯತ್ ಸದಸ್ಯ ಸಂಪತ್ ಸುವರ್ಣ ಹಾಗೂ ಈಶ್ವರ್ ಮಲ್ಪೆ ನೇತೃತ್ವದ ತಂಡಗಳು NDRF ಹಾಗೂ ಸ್ಥಳೀಯ ಈಜುಗಾರರ ಸಹಾಯದಿಂದ ಶೋಧ ಮುಂದುವರಿಸಿದ್ದರು. ಆರಂಭದಲ್ಲಿ ಸುಳಿವು ಸಿಗಲಿಲ್ಲ. ತದನಂತರದ ಕಾರ್ಯಾಚರಣೆಯಲ್ಲಿ, ತುಂಬೆ ಡ್ಯಾಂನಿಂದ ಕೆಳಗೆ ಡ್ರೋನ್‌ಗಳ ಮೂಲಕ ಶೋಧ ನಡೆಸಿದಲ್ಲಿ ನದಿಯಲ್ಲಿ ತೇಲುತ್ತಿರುವ ದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದ್ದು, ಶೋಧ ತಂಡ ದೇಹವನ್ನು ನೀರಿನಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.