ಮಡ್ಯಾರು: ಕೋಟೆಕಾರಿನ ಶ್ರೀ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ (ಶ್ರೀಮತಿ ಇಂದಿರಾಗಾಂಧಿ) ಮಹಿಳಾ ನರ್ಸಿಂಗ್ ವಿದ್ಯಾರ್ಥಿನಿಲಯದಿಂದ ಹೊರಹರಿಯುತ್ತಿರುವ ಕಲುಷಿತ ನೀರು ರಾಜಕಾಲುವೆಯ ಮೂಲಕ ನಡಾರ್‌ನಿಂದ ಪುಳಿತ್ತಾಡಿ ಹಾಗೂ ಮರಿಯಣಪಾಲ್ ಭಾಗದವರೆಗೆ ಹರಿದು ಗ್ರಾಮಸ್ಥರಲ್ಲಿ ಆಕ್ರೋಶ ಮೂಡಿಸಿದೆ.
ಈ ಕುರಿತು ಸುದ್ದಿಯಾಗಿದ್ದು ಹಾಸ್ಟೆಲ್ ಸ್ಥಳಕ್ಕೆ ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಶ್ರೀಮತಿ ಮಾಲಿನಿ, ಆರೋಗ್ಯಾಧಿಕಾರಿ ವಿಕ್ರಂ, ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ದಿವ್ಯ ಶೆಟ್ಟಿ, ಉಪಾಧ್ಯಕ್ಷ ಪ್ರವೀಣ್ ಬಗಂಬಿಲ, ಮಂಗಳೂರು ಮಂಡಲ ಯುವ ಮೋರ್ಚಾದ ಕಾರ್ಯದರ್ಶಿ ಗಣೇಶ್ ಭಂಡಾರಿ ನಡಾರ್ ಹಾಗೂ ಸ್ಥಳೀಯ ನಿವಾಸಿ ರಾಘವೇಂದ್ರ ಅವರು ಭೇಟಿ ನೀಡಿದರು.
ಸ್ಥಳೀಯ ಕೃಷಿಕರು ತಮ್ಮ ತೋಟಗಳಿಗೆ ಈ ಕೊಳಚೆ ನೀರಿನಿಂದ ಉಂಟಾಗುತ್ತಿರುವ ತೊಂದರೆಯ ಕುರಿತಾಗಿ ಅಧಿಕಾರಿಗಳಿಗೆ ವಿವರಿಸಿದರು.
ಸಮಸ್ಯೆಯ ತೀವ್ರತೆಯನ್ನು ಮನಗಂಡ ಅಧಿಕಾರಿಗಳು ಸ್ಥಳದಲ್ಲಿಯೇ ಪರಿಶೀಲನೆ ನಡೆಸಿ, ಹಾಸ್ಟೆಲ್ ನಿರ್ವಹಣಾಧಿಕಾರಿಗೆ ಕೊಳಚೆ ನೀರಿನ ಪೈಪ್ ಅನ್ನು ತಕ್ಷಣ ರಾಜಕಾಲುವೆಯಿಂದ ತೆಗೆದುಹಾಕುವಂತೆ ನೋಟಿಸ್ ನೀಡಿದರು.
ಸ್ಥಳೀಯರ ಅಹವಾಲಿಗೆ ಸ್ಪಂದನೆ ನೀಡಿದ ಅಧಿಕಾರಿಗಳ ಕ್ರಮವನ್ನು ಗ್ರಾಮಸ್ಥರು ಸ್ವಾಗತಿಸಿದ್ದಾರೆ.