ಭಾರತದ ಐತಿಹಾಸಿಕ ಸಾಧನೆ; ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕಶಕ್ತಿಯಾದ ಭಾರತ!

  • 25 May 2025 03:43:17 PM


ನವದೆಹಲಿ: ಭಾರತವು ಜಪಾನ್‌ನನ್ನು ಹಿಂದಿಕ್ಕಿ ಇದೀಗ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂಬುದಾಗಿ ಅಂತಾರಾಷ್ಟ್ರೀಯ ಹಣಕಾಸು ನಿಧಿಯ (IMF) ದತ್ತಾಂಶದ ಮೂಲಕ ದೃಢಪಟ್ಟಿದೆ ಎಂದು ನೀತಿ ಆಯೋಗದ ಸಿಇಒ ಬಿ.ವಿ.ಆರ್. ಸುಬ್ರಹ್ಮಣ್ಯಂ ಅವರು ಘೋಷಿಸಿದ್ದಾರೆ.

 

 ‘ವಿಕಸಿತ ಭಾರತ 2047’ ಗುರಿಯನ್ನು ಸಾಧಿಸಲು ನಡೆಯುತ್ತಿರುವ ಪ್ರಯತ್ನಗಳ ಮಧ್ಯೆ ಈ ಮಾಹಿತಿ ಮಹತ್ತರವಾದುದು ಎಂಬುದಾಗಿ ನೀತಿ ಆಯೋಗದ 10ನೇ ಆಡಳಿತ ಮಂಡಳಿ ಸಭೆಯ ಸಂದರ್ಭದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

 

ಭಾರತದ ಆರ್ಥಿಕತೆಯು 4 ಟ್ರಿಲಿಯನ್ ಯುಎಸ್ ಡಾಲರ್ ಗಡಿಯನ್ನು ದಾಟಿದೆ ಎಂಬುದನ್ನು ಅವರು ಅಧಿಕೃತವಾಗಿ ಪ್ರಕಟಿಸಿದರು. 

 

ಈ ಘೋಷಣೆಯು ನನ್ನದಲ್ಲ ಇದು ಐಎಂಎಫ್‌ನ ದತ್ತಾಂಶ ಆಧಾರಿತ ವಾಸ್ತವ್ಯ. ನಾನು ಮಾತನಾಡುತ್ತಿರುವ ಈ ಕ್ಷಣದಲ್ಲಿ ಭಾರತ ಜಪಾನ್‌ಗಿಂತ ದೊಡ್ಡ ಆರ್ಥಿಕ ಶಕ್ತಿ ಹೊಂದಿರುತ್ತದೆ ಮಾತ್ರವಲ್ಲದೆ ಈಗ ನಮಗೆ ನಮ್ಮ ಮುಂದೆ ಕೇವಲ ಅಮೆರಿಕ, ಚೀನಾ ಮತ್ತು ಜರ್ಮನಿಯಷ್ಟೇ ಉಳಿದಿವೆ ಎಂದು ಹೇಳಿದರು.

 

 ಪ್ರಸ್ತುತ ಯೋಜನೆಗಳು ಮತ್ತು ಕಾರ್ಯತಂತ್ರಗಳನ್ನು ಮುಂದುವರಿಸಿದರೆ, ಮುಂದಿನ 2-3 ವರ್ಷಗಳಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ಸಾಧ್ಯವಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

 

ಐಎಂಎಫ್‌ ಬಿಡುಗಡೆ ಮಾಡಿದ ಏಪ್ರಿಲ್ ಆವೃತ್ತಿಯ ವರ್ಲ್ಡ್ ಎಕನಾಮಿಕ್ ಔಟ್‌ಲುಕ್ ವರದಿಯ ಪ್ರಕಾರ, 2026 ರ ವೇಳೆಗೆ ಭಾರತದ ನಾಮಿನಲ್ ಜಿಡಿಪಿ ಸುಮಾರು 4,187 ಬಿಲಿಯನ್ ಯುಎಸ್ ಡಾಲರ್ ಆಗಲು ಸಾಧ್ಯವಿದೆ. ಇದು ಜಪಾನ್‌ನ 4,186 ಬಿಲಿಯನ್ ಡಾಲರ್‌ನಷ್ಟು ಅಥವಾ ಸ್ವಲ್ಪ ಹೆಚ್ಚಿನದಾಗಿದೆ. 

 

2024 ರವರೆಗೆ ಭಾರತವು ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಇದ್ದು, ಇತ್ತೀಚಿನ ಬೆಳವಣಿಗೆಯಿಂದ ಆ ಸ್ಥಾನದಿಂದ ಒಂದು ಹಂತ ಮೇಲಕ್ಕೇರುವಲ್ಲಿ ಯಶಸ್ವಿಯಾಗಿದೆ.