ನೀರ್ಚಾಲು: ನೀರ್ಚಾಲು ಸಮೀಪದ ಮಜಿರ್ಪಳ್ಳ ಕಟ್ಟೆಯ ಪ್ರತೀಕ್ಷಾ (19) ಎಂಬ ಯುವತಿ ನಾಪತ್ತೆಯಾಗಿದ್ದ ಪ್ರಕರಣ ಇತ್ತೀಚೆಗೆ ನಡೆದಿದ್ದು ಮೇ 28ರಂದು ಬೆಳಿಗ್ಗೆ ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಪ್ರತೀಕ್ಷಾ ಮತ್ತೆ ನಾಪತ್ತೆಯಾಗಿದ್ದಳು.
ಯುವತಿಯನ್ನು ಎಲ್ಲೆಡೆ ಹುಡುಕಿದರೂ ಕಾಣಿಸಿಕೊಳ್ಳದೇ ಇದ್ದಲ್ಲಿ ಆಕೆಯ ಮಾವ ಸತೀಶ್ ಬದಿಯಡ್ಕ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿ, ಯುವತಿಯ ಪತ್ತೆಗಾಗಿ ಕ್ರಮ ಕೈಗೊಂಡರು. ತನಿಖೆಯಲ್ಲಿ, ಪ್ರತೀಕ್ಷಾ ತನ್ನ ಪ್ರಿಯಕರ ಆಸಿಫ್ ಅಲಿ ಎಂಬ ಕಾಞಂಗಾಡ್ ನಿವಾಸಿಯೊಂದಿಗೆ ಕಾಣಿಸಿಕೊಂಡಿರುವುದಾಗಿ ತಿಳಿದು ಬಂದಿದೆ.
ಪ್ರತೀಕ್ಷಾ ಹಾಗೂ ಪ್ರಿಯಕರ ನಿನ್ನೆ ಕಾಸರಗೋಡು ನಗರ ಪೊಲೀಸ್ ಠಾಣೆಯಲ್ಲಿ ಹಾಜರಾಗಿದ್ದು ಮಾಹಿತಿ ದೊರಕಿದ ಬದಿಯಡ್ಕ ಪೊಲೀಸರು ಕಾಸರಗೋಡಿಗೆ ತೆರಳಿ ಯುವತಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದರು.
ನ್ಯಾಯಾಧೀಶರ ಮುಂದೆ ಪ್ರತೀಕ್ಷಾ ತನ್ನ ಪ್ರಿಯಕರ ಆಸಿಫ್ ಅಲಿಯೊಂದಿಗೆ ತೆರಳುವುದಾಗಿ ಹೇಳಿಕೆ ನೀಡಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ 'ಲವ್ ಜಿಹಾದ್' ಕುರಿತ ಚರ್ಚೆಗಳು ಭಾರಿಯಾಗಿದ್ದು, ಸಾರ್ವಜನಿಕರಲ್ಲಿ ಕುತೂಹಲವನ್ನು ಮೂಡಿಸಿದೆ.