ಬೆಂಗಳೂರು: ಹೋಟೆಲ್ ರೂಮ್‌ನಲ್ಲಿ ಪ್ರಿಂಟರ್ ಹಾಗೂ ಸ್ಕ್ಯಾನರ್‌ನ ಸಹಾಯದಿಂದ ನಕಲಿ ನೋಟುಗಳನ್ನು ತಯಾರಿಸಿದ್ದ 23 ವರ್ಷದ ಯುವಕನೊಬ್ಬನನ್ನು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತನು ಟೆಕ್ಸ್ಟೈಲ್ ಉದ್ಯಮಿಯ ಮಗನಾದ ಕ್ರಿಷ್ ಮಾಲಿ ಎಂದು ತಿಳಿದು ಬಂದಿರುತ್ತದೆ.
ಜೂನ್ 1ರಂದು ಸಣ್ಣ ಪುಟ್ಟ ವಿಚಾರಕ್ಕೆ ಮನೆ ಬಿಟ್ಟು ಹೊರಟ ಯುವಕ ಟಸ್ಕರ್ ಟೌನ್‌ನಲ್ಲಿರುವ ಹೋಟೆಲ್‌ವೊಂದರಲ್ಲಿ ಆನ್ಲೈನ್ ಮೂಲಕ ಬುಕ್ ಮಾಡಿಕೊಂಡಿದ್ದ ಎನ್ನಲಾಗಿದೆ.
ಆರೋಪಿ, ತಂಗಿದ್ದ ನಾಲ್ಕು ದಿನಗಳ ಕಾಲ 500 ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ಮುದ್ರಿಸಿದ್ದಾನೆ.ತನ್ನ ಬಳಿ ಇದ್ದ ಹಣ ಸಾಲದು ಎಂಬ ಆತಂಕದಿಂದಲೇ ಈ ರೀತಿಯ ಅಪರಾಧಕ್ಕೆ ಅವನು ಕೈಹಾಕಿದ್ದ.
ಚೆಕ್ ಔಟ್ ಆಗುವ ದಿನ ಜೂನ್ 7ರಂದು, ಹೋಟೆಲ್ ಬಿಲ್ ಪಾವತಿಸಲು ನಕಲಿ ನೋಟುಗಳನ್ನು ಬಳಸಿದ ಕ್ರಿಷ್, ಯಾವುದೇ ಅನುಮಾನಕ್ಕೂ ಅವಕಾಶ ನೀಡದೆ ಹೋಟೆಲ್ ಚೆಕ್ಔಟ್ ಮಾಡಿದ್ದ.
ಆದರೆ ಅದೇ ದಿನ ಬೆಳಗ್ಗೆ ತ್ಯಾಜ್ಯ ಸಂಗ್ರಹಿಸುವಾಗ ಪೌರಕಾರ್ಮಿಕರೊಬ್ಬರು ನಕಲಿ ನೋಟುಗಳ ತುಂಡುಗಳನ್ನು ಕಂಡು ಮ್ಯಾನೇಜರ್‌ಗೆ ಮಾಹಿತಿ ನೀಡಿದ್ದರು.
ಸಿಬ್ಬಂದಿ ತಕ್ಷಣ ಕ್ರಿಷ್ ಪಾವತಿಸಿದ ನೋಟುಗಳನ್ನು ಪರಿಶೀಲಿಸಿದ್ದು, ಅವು ನಕಲಿ ಎಂಬುದು ದೃಢಪಟ್ಟಿದೆ.
ತಕ್ಷಣವೇ ಕ್ರಮ ಕೈಗೊಂಡ ಹೋಟೆಲ್ ಮ್ಯಾನೇಜರ್ ಮೊಹಮ್ಮದ್ ಷರೀಫ್ ಉದ್ದೀನ್ ಅವರು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸರು ಕ್ರಿಷ್ ಮಾಲಿಯು ಹೋಟೆಲ್‌ನಲ್ಲಿ ತಂಗಿದ್ದ ಕೋಣೆಯನ್ನು ಪರಿಶೀಲಿಸಿದಾಗ, ಬಿಳಿ ಹಾಳೆಗಳ ಬಂಡಲ್, ನಕಲಿ ನೋಟುಗಳ ಚೂರುಗಳು, ಮತ್ತು ಪ್ರಿಂಟಿಂಗ್ ಸಲಕರಣೆಗಳು ಪತ್ತೆಯಾಗಿದ್ದು, ಆಧಾರ್ ವಿಳಾಸದ ಮೂಲಕ ಆರೋಪಿಯನ್ನು ಗುರುತಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಕ್ರಿಷ್ ಮಾಲಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನು ಆರೋಪಿ ಇತ್ತೀಚೆಗೆ ಬೇರೆ ಎಲ್ಲಾದರೂ ನಕಲಿ ನೋಟುಗಳನ್ನು ಬಳಕೆಮಾಡಿದ್ದನೋ ಎಂಬುದರ ಕುರಿತು ಪೊಲೀಸ್ ತನಿಖೆ ಮುಂದುವರಿಸಿದ್ದಾರೆ.