ಕೆಟ್ಟು ಹೋದ ನಡು ರಸ್ತೆಗೆ ಬಾಳೆ ಗಿಡ ನೆಟ್ಟು ಗ್ರಾಮಸ್ಥರ ಆಕ್ರೋಶ: ವೈರಲ್ ಫೋಟೋ ಕಂಡು ಶಾಸಕರೇ ಎಚ್ಚೆಟ್ಟುಕೊಳ್ಳುವುದು ಯಾವಾಗ ಎಂದ ನೆಟ್ಟಿಗರು...!

  • 13 Nov 2024 12:29:09 PM

ರಿಪಬ್ಲಿಕ್ ಹಿಂದೂ:- ಕರಾವಳಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹೆಸರಿನಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿದೆ. ಅದೇನೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದರೂ ಕೂಡಾ ರಸ್ತೆಗಳು ಮಾತ್ರ ಜನಸಂಚಾರಕ್ಕೆ, ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂದು ಜನರು ಶಪಿಸುತ್ತಲೇ ಇರುತ್ತಾರೆ. ಎಲ್ಲಿ ನೋಡಿದ್ರೂ ಕೂಡಾ ಅಪಾಯಕ್ಕೆ ಆಹ್ವಾನ ನೀಡುವ ರಸ್ತೆ ಗುಂಡಿಗಳು ಸಮಸ್ಯೆಗಳ ಆಗರವಾಗಿ ಬಿಟ್ಟಿದೆ. ಇದರಿಂದ ಅನೇಕ ಅಪಘಾತ ಪ್ರಕರಣಗಳು ಕೂಡಾ ಹೆಚ್ಚಾಗುತ್ತಲೇ ಇದೆ.

ಇದಕ್ಕೆ ಸಂಬಂಧಿಸಿದ ಅಧಿಕಾರಿಗಳಂತೂ ತಮಗೆ ಇದರ ಬಗ್ಗೆ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿರುತ್ತಾರೆ. ಈ ಮಧ್ಯೆ ಅನೇಕ ಸಂಘಟನೆಗಳು, ನಾಗರಿಕರು ವಿವಿಧ ರೀತಿಯಲ್ಲಿ ಪ್ರತಿಭಟನೆ ಮಾಡಿ ತಾವೇ ಎದುರು ಬಂದು ರಸ್ತೆ ಗುಂಡಿ ಮುಚ್ಚುವ ಕೆಲಸವನ್ನು ಮಾಡುತ್ತಿದ್ದಾರೆ. ಇದೀಗ ರಸ್ತೆ ಗುಂಡಿ ಮುಚ್ಚಲು ಬಾಳೆಗಿಡ ನೆಡುವ ಮೂಲಕ ವಿನೂತನ ಪ್ರತಿಭಟನೆಗೆ ಜನ ಮುಂದಾಗಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲ ಆ ಭಾಗದ ಶಾಸಕರನ್ನು ಕೂಡಾ ಜನಸಾಮಾನ್ಯರು ತರಾಟೆಗೆ ತೆಗೆದುಕೊಂಡಿದ್ದಾರೆ. 

*ಈ ಘಟನೆ ನಡೆದದ್ದು ಎಲ್ಲಿ...?* 
ಹೌದು..ಈ ಘಟನೆ ನಡೆದದ್ದು ಪುತ್ತೂರಿನಲ್ಲಿ. ಇಲ್ಲಿನ ವಿವೇಕಾನಂದ ಕಾಲೇಜು ಕ್ಯಾಂಪಸ್ ರಸ್ತೆಯ ಮಧ್ಯದಲ್ಲಿ ಮೃತ್ಯುಕೂಪದಂತೆ ರಚನೆಯಾಗಿರುವ ರಸ್ತೆ ಗುಂಡಿಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನವಹಿಸದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಅಲ್ಲಿಯ ಸ್ಥಳೀಯರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲದೆ ಆ ರಸ್ತೆಯ ಗುಂಡಿಯಲ್ಲಿ ಬಾಳೆ ಗಿಡ ನೆಟ್ಟು ಗುಂಡಿಯನ್ನು ಸಂಪೂರ್ಣವಾಗಿ ಮುಚ್ಚಿ ಹಾಕಿದ್ದಾರೆ. ಈ ಮೂಲಕ ಪುತ್ತೂರಿನ ಶಾಸಕರಾದ ಅಶೋಕ್ ರೈ ಅವರಿಗೂ ಬಿಸಿ ಮುಟ್ಟಿಸಿದ್ದಾರೆ. ಬಳಿಕ ಜೆಸಿಬಿ ಮೂಲಕ ಬಾಳೆ ಗಿಡವನ್ನು ತೆರವು ಗೊಳಿಸಿ ಅಲ್ಲಿಂದಲ್ಲಿಗೆ ಗುಂಡಿ ಮುಚ್ಚುವ ತೇಪೆ ಕಾರ್ಯ ನಡೆದಿದೆ.

*ವೈರಲ್ ಆದ ವೀಡಿಯೋದಲ್ಲಿ ಏನಿದೆ...?*

ಈ ಕುರಿತ ವಿಡಿಯೋವನ್ನು ಹರೀಶ್ ಬಂಗೇರ ಎಂಬವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿರುವ ವೀಡಿಯೋದಲ್ಲಿ ರಸ್ತೆಗುಂಡಿಯಲ್ಲಿ ಅಲ್ಲಿಯ ಸ್ಥಳೀಯರು ನೆಟ್ಟ ಬಾಳೆ ಗಿಡವನ್ನು ಜೆಸಿಬಿ ತರಿಸಿ ಅದರ ಸಹಾಯದಿಂದ ತೆರವುಗೊಳಿಸುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಒಟ್ಟಾರೆಯಾಗಿ ರಸ್ತೆ ಗುಂಡಿಯಲ್ಲಿ ಗಿಡ ನೆಟ್ಟ ಸ್ಥಳೀಯರ ಈ ಅರ್ಥಪೂರ್ಣ ಕಾರ್ಯಕ್ಕೆ ಭಾರೀ ಪ್ರಶಂಸೆ ಕೂಡಾ ವ್ಯಕ್ತವಾಗಿದೆ.

ಒಟ್ಟಾರೆಯಾಗಿ ಈ ವೀಡಿಯೋ ವೈರಲ್ ಆದ ಬೆನ್ನಲ್ಲೇ ಶಾಸಕರೇ ಈ ಬಗ್ಗೆ ನೀವು ಎಚ್ಚೆತ್ತುಕೊಳ್ಳೋದು ಯಾವಾಗ...? ಎಂದು ಪ್ರಶ್ನಿಸಿ ನೆಟ್ಟಿಗರು ಕಾಮೆಂಟ್ಸ್ ಮೂಲಕ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.