ಉಡುಪಿ: ಹೆಜಮಾಡಿ ಟೋಲ್ ಪ್ಲಾಜಾ ಬಳಿ ಭೀಕರ ರಸ್ತೆ ಅಪಘಾತ ಇಬ್ಬರಿಗೆ ಗಾಯ!

  • 02 Jul 2025 01:13:30 PM


ಉಡುಪಿ: ಹೆಜಮಾಡಿ ಟೋಲ್ ಪ್ಲಾಜಾ ಬಳಿ ಲಾರಿಯ ಹಿಂಭಾಗಕ್ಕೆ ಇನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರಿಗೆ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ 4 ಗಂಟೆಯ ಸುಮಾರಿಗೆ ಸಂಭವಿಸಿದೆ.

 

ಗಾಯಗೊಂಡವರನ್ನು ಕೋಡಿಕರೆ ನಿವಾಸಿ ಲೋಕೇಶ್ (43) ಹಾಗೂ ಕುಳಾಯಿ ನಿವಾಸಿ ವಿರಾಜ್ (29) ಎಂದು ಗುರುತಿಸಲಾಗಿದೆ. 

 

ಅವರು ಕಾರ್ಯಕ್ರಮ ಮುಗಿಸಿಕೊಂಡು ವಾಪಾಸಾಗುತ್ತಿದ್ದ ವೇಳೆಯಲ್ಲಿ ಈ ಅಪಘಾತ ಸಂಭವಿಸಿದೆ. ಮರದ ದಿಮ್ಮಿಗಳನ್ನು ಹೊತ್ತಿದ್ದ ಲಾರಿಯು ಟೋಲ್ ಗೇಟಿನಿಂದ ಕೆಲವೇ ದೂರದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದನ್ನು ಗಮನಿಸದ ಕಾರು ಚಾಲಕ ಹಿಂಭಾಗದಿಂದ ಡಿಕ್ಕಿ ಹೊಡೆದು ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

 

 ಕಾರಿನಲ್ಲಿ ಸಿಲುಕಿದ್ದ ವಿರಾಜ್ ರನ್ನು ಸ್ಥಳೀಯರು ಹಾಗೂ ಟೋಲ್ ಸಿಬ್ಬಂದಿ ಸುದೀರ್ಘ ಪ್ರಯತ್ನದ ಬಳಿಕ, ಸುಮಾರು ಒಂದು ಗಂಟೆ ಕಾಲ ಶ್ರಮಿಸಿ ರಕ್ಷಿಸಿದ್ದಾರೆ.

 

ಗಾಯಾಳುಗಳಿಬ್ಬರನ್ನೂ ತಕ್ಷಣ ಮಂಗಳೂರು ಎಜೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. 

 

ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.