ಪೈವಳಿಕೆ: ಬಿಜೆಪಿಯ ಪೈವಳಿಕೆ ಘಟಕದಲ್ಲಿ ತೀವ್ರ ಅಸಮಾಧಾನದ ಅಲೆ ಎದ್ದಿದ್ದು, ಪ್ರಮುಖ ನಾಯಕನ ಅಮಾನತು ಹಾಗೂ ಜಿಲ್ಲಾ ಅಧ್ಯಕ್ಷರ ವರ್ತನೆಯ ವಿರುದ್ಧವಾಗಿ ಬಿಜೆಪಿ ಪೈವಳಿಕೆ ಉತ್ತರ ಸಮಿತಿಯ ಅಧ್ಯಕ್ಷರಾದ ಸತ್ಯಶಂಕರ ಭಟ್ , ಪ್ರದಾನ ಕಾರ್ಯದರ್ಶಿಯಾದ ಅಡ್ವ. ಪ್ರವೀಣ್ ಕುಮಾರ್ ರೈ ಮತ್ತು ಬಿಜೆಪಿ ಪೈವಳಿಕೆ ದಕ್ಷಿಣ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ , ಪ್ರಧಾನ ಕಾರ್ಯದರ್ಶಿಯಾದ ಜಯಶಂಕರ ASB ಪಕ್ಷದ ಜವಾಬ್ದಾರಿಯಿಂದ ರಾಜೀನಾಮೆ ಘೋಷಿಸಿದ್ದಾರೆ.
ಪೈವಳಿಕೆ ಪಂಚಾಯತ್‌ನಲ್ಲಿ ಸಕ್ರಿಯವಾಗಿದ್ದ ಹಾಗೂ ಮಂಜೇಶ್ವರ ಮಂಡಲ ಸಮಿತಿಯಲ್ಲಿದ್ದ ಹಿರಿಯ ನಾಯಕರನ್ನು ಪಕ್ಷದಿಂದ ವಿನಾಕಾರಣ ಅಮಾನತು ಮಾಡಿದ ಕ್ರಮ ಕೈಕೊಂಡದಲ್ಲದೆ, ಸ್ಥಳೀಯ ನಾಯಕರ ಜೊತೆ ಯಾವುದೇ ಚರ್ಚೆ ಇಲ್ಲದೇ ತಾಳ್ಮೆಯಿಲ್ಲದ ನಿರ್ಧಾರ ತೆಗೆದು ಕೊಂಡಿದ್ದಾರೆ ಎಂಬ ಆರೋಪ ಹೊರವಲಾಗಿದೆ.
ಈ ತೀರ್ಮಾನದಿಂದಾಗಿ ಕ್ಷೇತ್ರದ ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿದೆ.
“ಪಕ್ಷದೊಳಗಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದಲ್ಲಿ, ತಾತ್ಕಾಲಿಕ ಸಭೆ ಮಾಡಿದಂತೆ ಹೇಳಿ ನಂತರ ಯಾವುದೇ ಕ್ರಮ ತೆಗೆದುಕೊಳ್ಳದೆ, ಸಮಸ್ಯೆಯನ್ನು ನಿರ್ಲಕ್ಷಿಸಿದ್ದಾರೆ.
ಇಂತಹ ನಿರ್ಲಕ್ಷ್ಯವು ಪಕ್ಷದ ನಂಬಿಕೆಯ ಕಾರ್ಯಕರ್ತರಲ್ಲಿ ಚಿಂತೆ ಮೂಡಿಸಿದೆ. ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ಶ್ರಮಿಸುತ್ತಿರುವ ನಮಗೆ ಇದು ನೋವು ತಂದಿದೆ,” ಎಂದು ಅವರು ರಾಜೀನಾಮೆಯ ಮೂಲಕ ಸ್ಪಷ್ಟಪಡಿಸಿದ್ದಾರೆ.
“ಪಕ್ಷದ ಕಾರ್ಯಗಳಿಗೆ ತಕ್ಷಣ ಸ್ಪಂದಿಸದಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರ್ಯಕರ್ತರ ಪ್ರಶ್ನೆಗಳಿಗೆ ನಾವು ಉತ್ತರ ನೀಡಲಾಗದಂತಾಗಿದೆ. ಈ ಹಿನ್ನಲೆಯಲ್ಲಿ, ಪಕ್ಷದ ಮೇಲಿನ ನಿಷ್ಠೆ ಇದ್ದರೂ, ಈ ನಿರ್ಧಾರಗಳನ್ನು ನಾವು ಬೆಂಬಲಿಸಲು ಸಾಧ್ಯವಿಲ್ಲ. ಅಮಾನತುಗೊಂಡ ನಾಯಕರನ್ನು ಪುನಃ ಸೇರ್ಪಡೆ ಮಾಡಬೇಕು. ನಮ್ಮ ಆತ್ಮಗೌರವಕ್ಕೂ ಮಿತಿಯಿದೆ,” ಎಂಬ ಮೂಲಕ ಅವರು ತಮ್ಮ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಈ ಕಾರಣದಿಂದ, ಜವಾಬ್ದಾರಿಗಳನ್ನು ತ್ಯಜಿಸುತ್ತಿದ್ದು, ಇನ್ನು ಮುಂದೆ ‘ಸಾಮಾನ್ಯ ಕಾರ್ಯಕರ್ತರಾಗಿ’ ಮುಂದುವರತ್ತೇವೆ ಎಂಬುದಾಗಿ ತಿಳಿಸಿದ್ದಾರೆ.