ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 110 ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಆರಂಭಿಸುವುದಕ್ಕಾಗಿ ಇದೀಗ ಸಿದ್ಧತೆಗಳು ನಡೆಯುತ್ತಿದೆ. ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ದಕ್ಷಿಣ ಕನ್ನಡದ 70 ಹಾಗೂ ಉಡಪಿಯ 40 ಅಂಗನವಾಡಿಗಳು ಸೇರಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಉಪಕ್ರಮದ ಭಾಗವಾಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪೂರ್ವಸಿದ್ಧತೆ ನಡೆಸುತ್ತಿದ್ದು, ಆಗಸ್ಟ್ 2ರಿಂದ ತರಗತಿಗಳು ಆರಂಭವಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಈ ಹಿಂದೆ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸುವ ಯೋಚನೆ ಮಾಡಿತ್ತು. ಆದರೆ, ಈ ಕ್ರಮದಿಂದ ಅಂಗನವಾಡಿಗಳು ಕೇಂದ್ರಗಳು ಮುಚ್ಚಲ್ಪಡುವ ಭೀತಿ ಎದುರಾದ್ದರಿಂದ . ಇದರ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದುದರಿಂದ ಅಂಗನವಾಡಿಗಳಲ್ಲಿಯೇ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸುವುದಕ್ಕಾಗಿ ಸರ್ಕಾರ ಒಪ್ಪಿಗೆ ನೀಡಿರುತ್ತದೆ.
ಮಂಗಳೂರಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ. ಕಾರಗಿ ಅವರ ಮಾತುಗಳ ಪ್ರಕಾರ, ಆಯ್ಕೆಯಾದ ಅಂಗನವಾಡಿ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುವುದು.
ಮಕ್ಕಳಿಗೆ ಉಚಿತ ಪಠ್ಯಪುಸ್ತಕಗಳು, ಬೋಧನೆ ಮತ್ತು ಮಧ್ಯಾಹ್ನದ ಊಟವನ್ನೂ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.
ದಕ್ಷಿಣ ಕನ್ನಡ ಜಿಲ್ಲಾ ಉಪನಿರ್ದೇಶಕ ಉಸ್ಮಾನ್ ಅವರು, “ಈ ಯೋಜನೆಗಾಗಿ ಸ್ಮಾರ್ಟ್ ಟಿವಿಗಳು, ಪಠ್ಯಪುಸ್ತಕಗಳು ಮತ್ತು ಅಗತ್ಯ ವಸ್ತುಗಳನ್ನು ಕೆಲ ಕೇಂದ್ರಗಳಿಗೆ ಈಗಾಗಲೇ ಪೂರೈಸಲಾಗಿದೆ ಎಂದೂ ಸರ್ಕಾರದಿಂದ ಅಧಿಕೃತ ಸೂಚನೆ ಬಂದ ತಕ್ಷಣ ತರಗತಿಗಳನ್ನು ಆರಂಭಿಸಲಾಗುವುದು” ಎಂದು ಅವರು ತಿಳಿಸಿದ್ದಾರೆ.