ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ) ಪದಾಧಿಕಾರಿಗಳು, ಪುತ್ತೂರಿನ ಮುಂಡೂರು ಗ್ರಾಮದ ಗೋಮಾಳ ಜಾಗವನ್ನು ಗೋಶಾಲೆ ಸ್ಥಾಪನೆಗೆ ಬಳಕೆ ಮಾಡಲು ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪುತ್ತೂರಿನಲ್ಲಿ ಗೋವುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಗೋ ಶಾಲೆ ಬೇಕೆಂದು ಸಾರ್ವಜನಿಕರ ಅಭಿಪ್ರಾಯದಂತೆ ಪೂಜ್ಯ ಪೇಜಾವರ ಸ್ವಾಮೀಜಿಗಳು ಕಳೆದ ವರ್ಷದ ಶ್ರೀನಿವಾಸ ಕಲ್ಯಾಣ ಸಂದರ್ಭದಲ್ಲಿ ಗೋ ಶಾಲೆ ಆರಂಬಿಸಬೇಕೆಂಬ ಆಶಯ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಟ್ರಸ್ಟ್ ಗೋ ಪ್ರೇಮಿಗಳ ಸಲಹೆ ಪಡೆದು ಸರಕಾರ ಜಾಗ ನೀಡಿದರೆ ವರ್ಷದ ಒಳಗೆ ಸಾರ್ವಜನಿಕರ ಸಹಕಾರ ದೊಂದಿಗೆ ಗೋ ಶಾಲೆ ಆರಂಭಿಸುವುದೆಂದು ಸಂಕಲ್ಪ ಮಾಡಿದ್ದು ಜಾಗವನ್ನು ಮಂಜೂರು ಮಾಡಿದಲ್ಲಿ ಮುಂದಿನ ದಿನದಲ್ಲಿ ಸುಸಜ್ಜಿತ ಗೋ ಶಾಲೆ ಪುತ್ತೂರಿನಲ್ಲಿ ನಿರ್ಮಾಣವಾಗಿ ಗೋ ಪ್ರೇಮಿಗಳ ಬಹುವರ್ಷದ ಕನಸು ನನಸಾಗಲಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ಸಂಬಂಧ ಕಂದಾಯ ಇಲಾಖೆಯವರ ಜೊತೆ ಚರ್ಚಿಸಿ ಮುಂದಿನ ನಿರ್ಧಾರವನ್ನು ತಿಳಿಸುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ.
ಭೇಟಿಯಲ್ಲಿ ಟ್ರಸ್ಟ್ ಅಧ್ಯಕ್ಷರಾದ ಮಹೇಂದ್ರ ವರ್ಮ, ಕಾರ್ಯದರ್ಶಿ ರವಿ ರೈ, ಪ್ರಮುಖರಾದ ಉಮೇಶ್ ಕೊಡಿಬೈಲು, ಗಣೇಶ್ ಭಟ್, ಅನಿಲ್ ತೆಂಕಿಲ, ಪ್ರಜ್ವಲ್ ಘಾಟೆ ಉಪಸ್ಥಿತರಿದ್ದರು.