ಕಾಸರಗೋಡು: ಕಾರ್ಮಿಕ ಸಂಘಟನೆಗಳ ರಾಷ್ಟ್ರವ್ಯಾಪ್ತಿ ಮುಷ್ಕರದಿಂದ ಕಾಸರಗೋಡು ಜಿಲ್ಲೆ ಬಂದ್ ವಾತಾವರಣದಲ್ಲಿ; ವಾಹನ ಸಂಚಾರ ಸ್ಥಗಿತ, ಅಂಗಡಿಗಳು ಸಂಪೂರ್ಣ ಬಂದ್!

  • 09 Jul 2025 04:17:29 PM


ಕಾಸರಗೋಡು: ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ ನಡೆಯುತ್ತಿರುವ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಪ್ರತಿಕ್ರಿಯೆ ನೀಡಿದ ಕಾಸರಗೋಡು ಜಿಲ್ಲೆಯಲ್ಲಿ ಬಂದ್ ವಾತಾವರಣ ನಿರ್ಮಾಣವಾಗಿದೆ.

 

ಜಿಲ್ಲೆಯಾದ್ಯಂತ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ಸುಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ನಗರದ ರಸ್ತೆಗಳು ನಿರ್ಜನವಾಗಿ ಪರಿಣಮಿಸಿವೆ. 

 

 ಬೆಳಗಿನ ಸಮಯದಲ್ಲಿ ಆಟೋ ರಿಕ್ಷಾ ಹಾಗೂ ಖಾಸಗಿ ವಾಹನಗಳು ರಸ್ತೆಗೆ ಇಳಿದರೂ, ಪ್ರತಿಭಟನಾಕಾರರು ತಡೆದ ಪರಿಣಾಮ ಅವುಗಳ ಸಂಚಾರವೂ ಬಿಟ್ಟುಬಿಟ್ಟಿದೆ.

 

ನಗರದ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದು, ಉದ್ಯಮ ಚಟುವಟಿಕೆ ಸಂಪೂರ್ಣವಾಗಿ ಸ್ಥಗಿತವಾಗಿದೆ. 

 

 ವಿವಿಧ ಕಾರ್ಮಿಕ ಸಂಘಟನೆಗಳು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಶಾಂತಿಯುತವಾಗಿ ಮುಕ್ತಾಯವಾಗಿದೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.

 

ಶಾಲಾ-ಕಾಲೇಜುಗಳು ತೆರೆದಿದ್ದರೂ ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿದ್ದರಿಂದ ಹಾಜರಾತಿ ಕಡಿಮೆಯಾಗಿರುತ್ತದೆ. 

 

ಸರಕಾರಿ ಕಚೇರಿಗಳಲ್ಲೂ ನೌಕರರ ಹಾಜರಾತಿ ತೀವ್ರವಾಗಿ ಇಳಿಕೆಯಾಗಿದೆ. ಮಂಗಳವಾರದ ಖಾಸಗಿ ಬಸ್ ಮುಷ್ಕರದ ನಂತರ, ಬುಧವಾರದ ಈ ಕಾರ್ಮಿಕ ಮುಷ್ಕರ ಸತತ ಎರಡನೇ ದಿನವೂ ಸಾರ್ವಜನಿಕ ಜೀವನದ ಮೇಲೆ ಪ್ರಭಾವ ಬೀರಿದೆ.

 

ಕುಂಬಳೆ, ಉಪ್ಪಳ, ಮಂಜೇಶ್ವರ, ಬದಿಯಡ್ಕ, ಕಾಞಂಗಾಡ್ ಸೇರಿ ಹಲವಾರು ಪ್ರಮುಖ ಭಾಗಗಳಲ್ಲಿ ಮುಷ್ಕರ ನಡೆದಿದ್ದು ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಅಂಗಡಿಗಳು ತೆರೆದದ್ದು ಕಂಡು ಬಂದು ಖಾಸಗಿ ವಾಹನಗಳು ಸಂಚಾರ ನಡೆಸುತ್ತಿರುವುದು ಕಂಡುಬಂದಿದೆ.