ಪೆರ್ಲ: ನಾಯಿ ಅಡ್ಡ ಬಂದ ಪರಿಣಾಮ ರಿಕ್ಷಾ ಮಗುಚಿ – ಚಾಲಕ ಸ್ಥಳದಲ್ಲೇ ಮೃತ್ಯು

  • 12 Jul 2025 07:11:58 PM


ಪೆರ್ಲ : ಆಟೋ ರಿಕ್ಷಾವೊಂದಕ್ಕೆ ನಾಯಿ ಅಡ್ಡ ಬಂದ ಪರಿಣಾಮ ತಪ್ಪಿಸಲು ಯತ್ನಿಸಿದ ಸಂದರ್ಭದಲ್ಲಿ ಸಂಭವಿಸಿದ ಅಪಘಾತದಲ್ಲಿ ರಿಕ್ಷಾ ಮಗುಚಿ, ಚಾಲಕ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಉಕ್ಕಿನಡ್ಕದಲ್ಲಿ ನಡೆದಿದೆ.

 

ಮೃತ ವ್ಯಕ್ತಿಯನ್ನು ಶಿವಗಿರಿ ದೇವಣ್ಣ ನಾಯ್ಕರ ಪುತ್ರ ಪ್ರವೀಣ (29) ಎಂದು ಗುರುತಿಸಲಾಗಿದೆ. ಪೆರ್ಲ ಪೇಟೆಯಲ್ಲಿ ರಿಕ್ಷಾ ಚಾಲಕರಾಗಿದ್ದ ಇವರು ಇಂದು ಬೆಳಗ್ಗೆ ಸುಮಾರು 10 ಗಂಟೆಯ ಹಾಗೆ ಬಣ್ಪುತ್ತಡ್ಕ ಭಾಗಕ್ಕೆ ಬಾಡಿಗೆ ಮರಳುತ್ತಿದ್ದ ವೇಳೆ ಉಕ್ಕಿನಡ್ಕ ಮೆಡಿಕಲ್ ಕಾಲೇಜು ಬಳಿ ಈ ದುರಂತ ಸಂಭವಿಸಿದೆ.

 

ರಿಕ್ಷಾದ ಎದುರು ನಾಯಿ ಅಡ್ಡ ಬಂದಿದ್ದು, ತಪ್ಪಿಸಲು ಯತ್ನಿಸಿದ ಸಂದರ್ಭದಲ್ಲಿ ರಿಕ್ಷಾ ಮಗುಚಿ ಬಿತ್ತು. ತಕ್ಷಣವೇ ಕಾಸರಗೋಡು ಆಸ್ಪತ್ರೆಗೆ ದಾಖಲಿಸಾಲಾದರೂ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯುವ ವೇಳೆ ಅವರು ಕೊನೆಯುಸಿರೆಳೆದರು.

 

ಮೃತ ಪ್ರವೀಣ ಅವರು ತಂದೆ ದೇವಣ್ಣ ನಾಯ್ಕ, ತಾಯಿ ಶಾರದಾ, ಸಹೋದರರೊಬ್ಬರು ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. 

 

ಅವರ ಅಕಾಲಿಕ ನಿಧನಕ್ಕೆ ಪೆರ್ಲ ಪೇಟೆಯ ರಿಕ್ಷಾ ಚಾಲಕ ಮಾಲಕರ ಸಂಘವು ಸಂತಾಪ ಸೂಚಿಸಿದೆ.