ಎಚ್ಚರ| ವೆಡ್ಡಿಂಗ್ ಕಾರ್ಡ್ ಬಂತೆಂದು ನಂಬಿ ಆತುರಪಟ್ರೆ ಅಷ್ಟೇ....!!! ಹುಷಾರ್ ಹೀಗೂ ಹ್ಯಾಕ್ ಮಾಡ್ತಾರೆ...!!!

  • 15 Nov 2024 08:25:17 PM


ರಿಪಬ್ಲಿಕ್ ಹಿಂದೂ:- ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಆಧುನಿಕ ತಂತ್ರಜ್ಞಾನವನ್ನೇ ಬಂಡವಾಳ ಮಾಡಿಕೊಂಡು ಸೈಬರ್ ಖದೀಮರು ಜನರನ್ನು ಮಂಗ ಮಾಡಿ ಲಕ್ಷಾಂತರ ರೂಪಾಯಿ ಹಣ ಲಪಟಾಯಿಸುತ್ತಿದ್ದಾರೆ. ಇಮೇಲ್, ವಾಟ್ಸಾಪ್, ಸೋಷಿಯಲ್ ಮೀಡಿಯಾ ಸೇರಿದಂತೆ ಎಲ್ಲದರಲ್ಲೂ ಹ್ಯಾಕ್ ಮಾಡಿ ಸ್ಕ್ಯಾಮ್ ನಡೆಸುತ್ತಿರುವ ಸೈಬರ್ ಕ್ರಿಮಿಗಳು ಜನರ ಮಾನ ಹರಾಜು ಮಾಡುವುದಲ್ಲದೆ ಹಣಕ್ಕಾಗಿ ಬೇಡಿಕೆಯಿಟ್ಟು ಬೆದರಿಸಿ ಸಾಯುವ ಹಂತಕ್ಕೂ ನೂಕಿರುವ ಅದೆಷ್ಟೋ ಪ್ರಕರಣಗಳಿವೆ. ಈ ಎಲ್ಲ ಅಪರಾಧಗಳ ಬಗ್ಗೆ ಇತ್ತೀಚೆಗೆ ಜನರು ಸ್ವಲ್ಪ ಎಚ್ಚೆತ್ತುಕೊಳ್ಳುತ್ತಿರುವುದರಿಂದ ಸೈಬರ್ ಕ್ರೈಮ್ ದುರುಳರು ಮತ್ತೊಂದು ಹೊಸ ಮಾರ್ಗವನ್ನು ಕಂಡುಹಿಡಿದಿದ್ದಾರೆ. ಈ ವಿಚಾರ ಕೇಳಿದ್ರೆ ನೀವೂ ಶಾಕ್ ಆಗೋದು ಗ್ಯಾರಂಟಿ....!!

*ವಾಟ್ಸಾಪ್ ನಲ್ಲಿ ಮದ್ವೆ ಆಮಂತ್ರಣ ಬಂದ್ರೆ ದಿಢೀರ್ ಓಪನ್ ಮಾಡ್ಬೇಡಿ....!!*

ಇತ್ತೀಚೆಗೆ ಎಲ್ಲವೂ ಡಿಜಿಟಲೀಕರಣವಾಗಿಬಿಟ್ಟಿದೆ. ಮದುವೆ ಸೀಸನ್ ಎಂದ ಮೇಲೆ ಅದೆಷ್ಟೋ ಆತ್ಮೀಯರ ಮದುವೆ ಆಮಂತ್ರಣ ಕಾರ್ಡ್ ಗಳು ವಾಟ್ಸಾಪ್ ನಲ್ಲಿ ಬರೋದು ಮಾಮೂಲಿ. ಹಾಗಂತ ಅಪರಿಚಿತ ಸಂಖ್ಯೆಯಿಂದ ನಿಮಗೇನಾದ್ರೂ ಮದುವೆ ಆಮಂತ್ರಣ ಪತ್ರಿಕೆ ಬಂತು ಎಂದರೆ ತೆರೆಯಲು ಆತುರಪಡಬೇಡಿ. ಡಿಜಿಟಲ್ ವೆಡ್ಡಿಂಗ್ ಕಾರ್ಡ್‌ಗಳು ಸಾಮಾನ್ಯವಾಗುತ್ತಿದ್ದಂತೆ, ಸೈಬರ್ ಕ್ರಿಮಿನಲ್‌ಗಳು ಇದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ವಾಟ್ಸಾಪ್ ಮೂಲಕ ಮದುವೆ ಆಮಂತ್ರಣ ಕಳುಹಿಸಿ ಪೋನ್ ನಲ್ಲಿರುವ ಮಾಹಿತಿಯನ್ನು ಸಂಪೂರ್ಣ ಹ್ಯಾಕ್ ಮಾಡುತ್ತಾರೆ. 

*ವೆಡ್ಡಿಂಗ್ ಕಾರ್ಡ್ ಮುಖೇನ ನಡೆಯುತ್ತೆ ಈ ರೀತಿಯ ಮೋಸ...!!*

ವಂಚಕರಿಂದ ಬಂದ ಮೆಸೇಜ್ ಮದುವೆಗೆ ಆಹ್ವಾನಿಸಲ್ಪಡುವ ಕುರಿತು ಕೆಲವು ಸಾಲುಗಳನ್ನು ಒಳಗೊಂಡಿರುತ್ತದೆ. ಒಮ್ಮೆಲೆ ನಮಗೆ ಅದು ಅಂದಾಜಿಗೆ ಬರಲು ಸಾಧ್ಯವಿಲ್ಲದಿರಬಹುದು. ಅದರ ಜೊತೆ ಅಟ್ಯಾಚ್ ಮಾಡಿರುವುದು ಮೇಲ್ನೋಟಕ್ಕೆ ಡಿಜಿಟಲ್ ಮದುವೆ ಕಾರ್ಡ್‌ನಂತೆ ಕಾಣಿಸುತ್ತದೆ ಕೂಡಾ. ಆದರೆ ಇವು ಎಪಿಕೆ ಫೈಲ್‌ಗಳಾಗಿರುತ್ತದೆ. ಒಮ್ಮೆ ಡೌನ್‌ಲೋಡ್ ಮಾಡಿದರೆ ಇದರಲ್ಲಿದ್ದ ಕುತಂತ್ರಾಂಶ(ಮಾಲ್ ವೇರ್), ನಿಮ್ಮ ಫೋನ್‌ನಲ್ಲಿ ರಹಸ್ಯವಾಗಿ ಸ್ಥಾಪಿಸಿ ಮತ್ತು ಸೂಕ್ಷ್ಮ ಡೇಟಾವನ್ನು ಕದ್ದು ನಿಮ್ಮ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಬಹುದು. ಸೈಬರ್ ಕ್ರಿಮಿನಲ್‌ಗಳು ನಿಮ್ಮ ಫೋನ್‌ನಲ್ಲಿ ಕಂಡುಬರುವ ಡೇಟಾವನ್ನು ಬಳಸಿಕೊಂಡು ಫೋನ್‌ನ ಮಾಲೀಕರಂತೆ ನಟಿಸುವ ಮೂಲಕ ಯಾರನ್ನಾದರೂ ಮತ್ತಷ್ಟು ವಂಚಿಸಲು ದಾರಿ ಕಂಡು ಹಿಡಿಯಬಹುದು. ಅಥವಾ ಹ್ಯಾಕರ್ ಗಳು ಹಣಕ್ಕಾಗಿ ಬೇಡಿಕೆ ಇಡಬಹುದು. ಆದ್ದರಿಂದ ಅಪರಿಚಿತ ನಂಬರ್ ನಿಂದ ವಾಟ್ಸಾಪ್, ಟೆಲಿಗ್ರಾಂ ಅಥವಾ ಯಾವುದೇ ಮಾಧ್ಯಮಕ್ಕೆ ಸಂದೇಶಗಳು ಬಂದಲ್ಲಿ ಒಮ್ಮೆಲೆ ಓಪನ್ ಮಾಡಲು ಹೋಗಬೇಡಿ. ಇದರಿಂದ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿರುತ್ತದೆ. ಯಾವುದೇ ಫೈಲ್‌ಗಳನ್ನು ಡೌನ್‌ಲೋಡ್ ಮಾಡಬೇಡಿ. ಇಂತಹ ವಿಚಾರಗಳಲ್ಲಿ ನಾವು ಆದಷ್ಟು ಜಾಗರೂಕತೆಯಿಂದ ಇದ್ದಷ್ಟು ನಮಗೇ ಒಳ್ಳೆಯದು ಎಂದು ಸೈಬರ್ ಕ್ರೈಮ್ ಪೊಲೀಸರು ಕೂಡಾ ಸಲಹೆಯನ್ನು ನೀಡಿದ್ದಾರೆ.