ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ 28ನೇ ಮಣ್ಣಗುಡ್ಡ ವಾರ್ಡ್‌ನ ಗಾಂಧಿನಗರದಲ್ಲಿರುವ ದ.ಕ ಜಿಲ್ಲಾ ಪಂಚಾಯತ್ ಹಿ.ಪ್ರಾ. ಶಾಲಾ ಆವರಣದಲ್ಲಿ ಹೊಸ ಅಂಗನವಾಡಿ ಕೇಂದ್ರದ ಕೊಠಡಿಯ ಶಿಲಾನ್ಯಾಸ ಕಾರ್ಯಕ್ರಮವು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ನಡೆಯಿತು.
ಶಿಲಾನ್ಯಾಸ ಸಮಾರಂಭದಲ್ಲಿ ಮಾತನಾಡಿದ ಶಾಸಕರು, ತಮ್ಮ ಸತತ ಪ್ರಚಾರ ಮತ್ತು ಕಳಕಳಿಯಿಂದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಮಂಗಳೂರು ನಗರ ದಕ್ಷಿಣ ಭಾಗಕ್ಕೆ ಗಾಂಧಿನಗರ ಮತ್ತು ಕಸಬಾ ಬೆಂಗ್ರೆಯಲ್ಲಿ ಅಂಗನವಾಡಿ ಕೊಠಡಿಗಳ ನಿರ್ಮಾಣಕ್ಕಾಗಿ 20 ಲಕ್ಷ ರೂ. ವಿಶೇಷ ಅನುದಾನ ಮಂಜೂರಾದಿದೆ ಎಂದು ಹೇಳಿದರು .
ಶೀಘ್ರದಲ್ಲಿಯೇ ಕಸಬಾ ಬೆಂಗ್ರೆಯಲ್ಲಿಯೂ ಕೂಡ ಶಿಲಾನ್ಯಾಸ ನೆರವೇರಿಸಿ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದು ಹೇಳಿದರು.
ಹಾಗೆಯೇ ಈ ಮೂಲಕ ಪ್ರಾದೇಶಿಕ ಮಕ್ಕಳಿಗೆ ಉತ್ತಮ ಸೌಲಭ್ಯಗಳಿಂದ ಕೂಡಿದ ಭವಿಷ್ಯದ ಬುನಾದಿಯನ್ನು ಒದಗಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ನಿಕಟಪೂರ್ವ ಮಹಾನಗರ ಪಾಲಿಕೆ ಸದಸ್ಯೆ ಸಂಧ್ಯಾ ಮೋಹನ್ ಆಚಾರ್ಯ, ಬಿಜೆಪಿ ಪ್ರಮುಖರಾದ ಮೋಹನ್ ಆಚಾರ್ಯ, ವಸಂತ್ ಶೆಟ್ಟಿ, ರಘುನಾಥ್ ಪ್ರಭು, ಗುರು ಚರಣ್, ಮುಖ್ಯ ಶಿಕ್ಷಕಿ ಶರ್ಮಿಳಾ ಡಿಸೋಜ, ಸಹ ಶಿಕ್ಷಕಿ ರಾಜೇಶ್ವರಿ ಪ್ರಭು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಕೆ.ಬಿ, ಶಾಲೆಯ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿ ಸಂಘದ ಸದಸ್ಯರು ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.