ಕಲ್ಲಡ್ಕ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ತಾಲೂಕು ಇದರ ವತಿಯಿಂದ ವಿಟ್ಲ ಸರ್ಕಾರಿ ಬಸ್ ಸಮಸ್ಯೆಗೆ ಖಂಡನೆ ಸೂಚಿಸಿ ನಿನ್ನೆ ಕಲ್ಲಡ್ಕದಲ್ಲಿ ತೀವ್ರ ಪ್ರತಿಭಟನೆ ನಡೆಯಿತು.
ಮಂಗಳೂರು-ವಿಟ್ಲ ಮಾರ್ಗದ ಸರ್ಕಾರಿ ಬಸ್‌ಗಳು ಸರಿಯಾದ ಸಮಯದಲ್ಲಿ ಬಾರದೇ ಇರುವುದು ಮತ್ತು ಬಸ್‌ಗಳ ಸಂಖ್ಯೆ ಕಡಿಮೆಯಾಗಿರುವುದು ಹಾಗೆಯೇ ವಿದ್ಯಾರ್ಥಿಗಳ ಜನಸಂದಣಿಗೆ ಸ್ಪಂದಿಸದ ವ್ಯವಸ್ಥೆ ಇವು ವಿದ್ಯಾರ್ಥಿಗಳ ಮೇಲೆ ನೇರ ಪರಿಣಾಮ ಬೀರುತ್ತಿವೆ ಎಂದೂ ಈ ಕುರಿತಾಗಿ ಹಲವಾರು ಬಾರಿ ಮನವಿ ಸಲ್ಲಿಸಲಾಗಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆಯನ್ನು ಅನುಸರಿಸುತ್ತಿದ್ದಾರೆ ಎಂದು ಎಬಿವಿಪಿ ಕಾರ್ಯಕರ್ತರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳು ಸ್ಥಳಕ್ಕೆ ಬಾರದೇ ಇರುವ ಕಾರಣದಿಂದ, ಕೆಳ ಹುದ್ದೆಯ ಅಧಿಕಾರಿಯನ್ನು ಕಳುಹಿಸಿ ಪ್ರತಿಭಟನೆಯನ್ನು ನಿಲ್ಲಿಸಲು ಯತ್ನಿಸಲಾಯಿತು. ಆದರೆ ಕಾರ್ಯಕರ್ತರು ಅವರ ಮಾತನ್ನು ತಿರಸ್ಕರಿಸಿ ಬಸ್ ತಡೆದ ಮೂಲಕ ಖಂಡನೆಯನ್ನು ಮುಂದುವರೆಸಲು ಮುಂದಾದರು.
ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ, ಮೇಲಾಧಿಕಾರಿಗಳ ಗಮನಕ್ಕೆ ವಿಷಯ ತರಲಾಗುವುದು ಎಂದು ಭರವಸೆ ನೀಡಿದರು.
ಆದರೂ ಎಬಿವಿಪಿ ಕಾರ್ಯಕರ್ತರು ಒಂದು ವಾರದ ಗಡುವು ನೀಡಿ, ಈ ಅವಧಿಯೊಳಗೆ ಸಮಸ್ಯೆ ಪರಿಹಾರವಾಗದಿದ್ದಲ್ಲಿ ಕಲ್ಲಡ್ಕದಲ್ಲಿ ಬೃಹತ್ ಮಟ್ಟದ ಬಸ್ ತಡೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶ್ರೀರಾಮ ವಿದ್ಯಾಕೇಂದ್ರ ಹಾಗೂ ಇತರ ಕಾಲೇಜುಗಳ ವಿದ್ಯಾರ್ಥಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಎಬಿವಿಪಿಯ ಪ್ರಮುಖರಾದ ಮಂಗಳೂರು ವಿಭಾಗ ಸಂಚಾಲಕ ಸುವಿತ್ ಶೆಟ್ಟಿ, ಜಿಲ್ಲಾಸಂಚಾಲಕ ಶ್ರೀಜಿತ್ ರೈ, ಸಹಸಂಚಾಲಕ ಪ್ರತೀಕ್ ಬಂಟ್ವಾಳ, ತಾಲೂಕು ಸಹಸಂಚಾಲಕಿ ಧನುಶ್ರೀ, ಹಾಗೂ ಕಲಾ ಮಂಚ್ ಸಮೀಕ್ಷಾ, ಪ್ರಿಯಾಂಕಾ, ತ್ರೀಷಾ, ಮೋನಿಷ್ ಗೌತಮ್, ಹರ್ಷಿತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.