ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿ.7ರಂದು ಅದ್ಧೂರಿಯಾಗಿ ನಡೆಯಲಿದೆ ಮಹಾರಥೋತ್ಸವ...!

  • 20 Nov 2024 07:45:19 PM

ರಿಪಬ್ಲಿಕ್ ಹಿಂದೂ:- ಇತಿಹಾಸಪ್ರಸಿದ್ಧ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದ.ಕ ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ಇಲ್ಲಿಗೆ ಬೇರೆ ರಾಜ್ಯಗಳಿಂದ, ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಾರೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ಷಷ್ಠಿ ಮಹೋತ್ಸವಕ್ಕಂತೂ ಕಿಕ್ಕಿರಿದು ಜನ ಸೇರುತ್ತಾರೆ. ಅನೇಕ ಧಾರ್ಮಿಕ ಆಚರಣೆಗಳು, ವಿವಿಧ ಉತ್ಸವಾದಿ ಕಾರ್ಯಗಳು ಇಲ್ಲಿ ನಿರಂತರವಾಗಿ ನಡೆಯುತ್ತದೆ. ಈಗಾಗಲೇ ಚಂಪಾ ಷಷ್ಠಿ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ಸಿದ್ಧತೆಗಳು ಕೂಡಾ ಭರದಿಂದ ಸಾಗುತ್ತಿದೆ. 

ನ.27ರಿಂದ ಡಿ.12ರವರೆಗೆ ನಡೆಯಲಿದೆ ವಿವಿಧ ಪೂಜಾ ಸೇವೆಗಳು...

ಚಂಪಾಷಷ಼್ಠಿ ಮಹೋತ್ಸವದ ಹಿನ್ನೆಲೆ ಇದೇ ಬರುವ ನ.27ರಿಂದ ಡಿ.12ರವರೆಗೆ ಶ್ರೀ ಕ್ಷೇತ್ರದಲ್ಲಿ ಅನೇಕ ಪೂಜಾ ಕೈಂಕರ್ಯಗಳು ನಿರಂತರವಾಗಿ ನಡೆಯಲಿದೆ. ಷಷ್ಠಿ ಮಹೋತ್ಸವದ ಪ್ರಯುಕ್ತ ದೇಗುಲದ ಆಡಳಿತ ಮಂಡಳಿ ಭಕ್ತಾದಿಗಳಿಗೆ ಆಮಂತ್ರಣ ಪತ್ರಿಕೆಯನ್ನು ಕೂಡಾ ಬಿಡುಗಡೆ ಮಾಡಿದೆ. 

*ಡಿ.7 ರಂದು ದೇವರ ಮಹಾ ರಥೋತ್ಸವ...!*

ಸಾಮಾನ್ಯವಾಗಿ ಚಂಪಾಷಷ಼್ಠಿಯಂದು ದೇವರ ವಿಶೇಷ ಪೂಜೆಗಳು ನಡೆಯುತ್ತದೆ. ಅಶ್ವತ್ಥ ಕಟ್ಟೆಯಲ್ಲಿ ಸರ್ಪ ರಚನೆಯ ವಿಗ್ರಹವನ್ನಿಟ್ಟು ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಲಾಗುತ್ತದೆ. ಅಷ್ಟೇ ಅಲ್ಲದೆ ಹಾಲೆರೆದು ಅಭಿಷೇಕ ಹಾಗೂ ಪಾಯಸದ ನೈವೇದ್ಯವನ್ನು ಕೂಡಾ ಅರ್ಪಿಸಲಾಗುತ್ತದೆ. ಈ ಸುದಿನ ಹಲವಾರು ಭಕ್ತಾದಿಗಳು ಉಪವಾಸ ವೃತವನ್ನು ಕೂಡಾ ಆಚರಿಸುತ್ತಾರೆ. ಇನ್ನು ಷಷ್ಠಿಯ ಸಂದರ್ಭ ದೇಗುಲದಲ್ಲಿ ನಡೆಯುವ ಸೇವೆಯ ಬಗ್ಗೆ ಹೇಳೋದಾದ್ರೆ ಕಾರ್ತಿಕ ಪೂಜೆ, ಮಹಾರಥೋತ್ಸವ, ನಾಗಪ್ರತಿಷ್ಠೆ, ಆಶ್ಲೇಷ ಬಲಿ, ರುದ್ರಾಭಿಷೇಕ, ಶೇಷ ಸೇವೆ ಇತ್ಯಾದಿ ಅನೇಕ ಸೇವೆಗಳು ಜರಗುತ್ತದೆ.