ಮತ್ತೆ ಮುನ್ನೆಲೆಗೆ ಬಂತು ದತ್ತಪೀಠ ವಿವಾದ...!! ಏನಿದು ಹಿಂದೂ- ಮುಸ್ಲಿಂ ಕುಂಕುಮ ಗಲಾಟೆ...!!

  • 24 Nov 2024 03:19:08 PM

ರಿಪಬ್ಲಿಕ್ ಹಿಂದೂ:- ದತ್ತಪೀಠ ವಿವಾದ ಇಂದು ನಿನ್ನೆಯದಲ್ಲ. ಈ ವಿವಾದವನ್ನು ಎಂಟು ವಾರದಲ್ಲಿ ಬಗೆಹರಿಸುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ ಕೂಡಾ ರಾಜ್ಯ ಸರ್ಕಾರ ಈ ಬಗ್ಗೆ ಉದಾಸೀನತೆ ತೋರಿಸುತ್ತಿದೆ. ಇತ್ತ ಕಡೆ ದತ್ತಜಯಂತಿಗೆ ದಿನಗಣನೆ ಆರಂಭವಾಗಿದೆ. ಹಿಂದೂ- ಮುಸ್ಲಿಮರು ಮಾತ್ರ ಈ ವಿಚಾರದಲ್ಲಿ ಕಿತ್ತಾಡುತ್ತಲೇ ಇದ್ದಾರೆ. ಇದೀಗ ಈ ವಿವಾದ ಮತ್ತೊಂದು ಸ್ವರೂಪವನ್ನು ಪಡೆದುಕೊಂಡಿದೆ.

ಗೋರಿಗಳ ಮೇಲೆ ಕುಂಕುಮ ಹಚ್ಚಿದ್ರೆ ತಪ್ಪೇನು...?

ವಿವಾದಿತ ಗುಹೆಯೊಳಗಿರುವ ಗೋರಿಗಳ ಮೇಲೆ ಕುಂಕುಮ ಹಚ್ಚಿರುವ ಆರೋಪ ಇದೀಗ ಕೇಳಿಬಂದಿದ್ದು, ಇದು ಇಸ್ಲಾಂ ಧರ್ಮದವರ ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸುವ ಪ್ರಯತ್ನ ಎಂದು ಶಾಖಾದ್ರಿ ಕುಟುಂಬಸ್ಥರು ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಬಾಬಾ ಬುಡನ್‌ ಸ್ವಾಮಿ ದರ್ಗಾ ಎದುರು ಪ್ರತಿಭಟನೆ ನಡೆಸಿ, ಮುಜರಾಯಿ ಇಲಾಖೆಯ ಅಧಿಕಾರಿಗಳ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಕುಂಕುಮ ಹಚ್ಚಿ ಗೋರಿಗಳ ಪೂಜೆ ಮಾಡಿದಕ್ಕೆ ತಪ್ಪೇನು..? ಇದು ಹಿಂದೂಗಳ ಜಾಗವಲ್ಲವೇ ಎಂದು ಹಿಂದೂಗಳು ಕೂಡಾ ರೊಚ್ಚಿಗೆದ್ದಿದ್ದಾರೆ. ಈ ಹಿಂದೂ ಮುಸ್ಲಿಂ ‌ಭೂ ವಿವಾದ ಕಳೆದ 25 ವರ್ಷಗಳಿಂದ ನಡೆಯುತ್ತಿದೆ. ಇದು  ಸಂಪೂರ್ಣ ಹಿಂದೂಗಳ ಪಾಲಾಗಬೇಕೆಂದು ಆಗ್ರಹಿಸಿ ಡಿಸೆಂಬರ್ 6 ರಿಂದ 14 ರ ವರೆಗೆ ದತ್ತಜಯಂತಿ ನಡೆಯಲಿದೆ. ಇನ್ನೂ ವಿವಾದದಲ್ಲೇ ಸಿಲುಕಿಕೊಂಡಿರುವ ಈ ಜಾಗದಲ್ಲಿ ಹಿಂದೂ ಮುಸ್ಲಿಮರು ಇದು ನಮ್ಮ ಜಾಗ ಎಂದು ಹೋರಾಟ ಮಾಡುತ್ತಲೇ ಬಂದಿದ್ದಾರೆ. ಈ ಮಧ್ಯೆ ಗೋರಿಗೆ ಕುಂಕುಮ ಹಚ್ಚಿರುವ ಘಟನೆ ಗಂಭೀರವಾದ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. 

ಏನಿದು ದತ್ತಪೀಠ ವಿವಾದ...? 

ಬಾಬಾಬುಡನ್‌ ಗಿರಿ ಅಥವಾ ಶ್ರೀಗುರುದತ್ತಾತ್ರೇಯ ಪೀಠ ಮುಸ್ಲಿಮರಿಗೆ ಸೇರಿದ್ದೆ ಅಥವಾ ಹಿಂದೂಗಳಿಗೆ ಸೇರಿದ್ದೇ ಎನ್ನುವುದು ಹಿಂದಿನಿಂದಲೂ ವಿವಾದಕ್ಕೆ ಕಾರಣವಾಗಿದೆ. ಅದಕ್ಕೆ ತಾರ್ಕಿಕ ಅಂತ್ಯ ಇನ್ನೂ ಸಿಕ್ಕಿಲ್ಲ. ಸರಕಾರಿ ದಾಖಲೆಗಳಲ್ಲಿ ಶ್ರೀ ಗುರು ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಎಂದು ಹೇಳಲಾಗಿದೆ. ಈ ಸ್ಥಳವನ್ನು ಬಾಬಾ ಬುಡನ್‌ ಗಿರಿ ಎಂದು ಕೆಲವರು ಕರೆದರೆ, ಇನ್ನು ಕೆಲವರು ಇನಾಂ ದತ್ತಾತ್ರೇಯ ಪೀಠ ಎನ್ನುತ್ತಾರೆ. ಒಂದು ಕಾಲದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ತಾಣವಾಗಿ ಇದು ಗುರುತಿಸಲ್ಪಟ್ಟಿತ್ತು. ಆದರೆ, ಬಳಿಕ ವಿವಾದ ಹುಟ್ಟಿಕೊಂಡಿತು. ಅಲ್ಲಿಂದ ಇಲ್ಲಿಯವರೆಗೆ ಇದು ಸಂಪೂರ್ಣವಾಗಿ ಹಿಂದೂಗಳದ್ದೇ ಜಾಗ, ಅಥವಾ ಮುಸ್ಲಿಮರಿಗೆ ಸೇರಿದ ಜಾಗ ಎನ್ನುವ ವಿಚಾರಕ್ಕೆ ಸ್ಪಷ್ಟನೆ ದಕ್ಕಿಲ್ಲ..ಆದರೆ ಅಂದಿನಿಂದ ಇಂದಿನವರೆಗೆ ಹಿಂದೂಗಳು ಈ ಜಾಗ ತಮ್ಮ ಪಾಲಾಗಲು ಸತತವಾಗಿ ಹೋರಾಟವನ್ನು ನಡೆಸುತ್ತಾ ಬರುತ್ತಿದ್ದಾರೆ.