ಬೆಳ್ಳಂಬೆಳಗ್ಗೆ ನಡೆಯಿತು ಸರಣಿ ಅಪಘಾತ...!! ವಿದ್ಯಾರ್ಥಿಗಳಿದ್ದ ಖಾಸಗಿ ಬಸ್ ಪಲ್ಟಿ...!!

  • 27 Nov 2024 07:16:08 PM

ರಿಪಬ್ಲಿಕ್ ಹಿಂದೂ:- ದ.ಕ ಜಿಲ್ಲೆಯಲ್ಲಿ ನಡೆಯುವ ಅನೇಕ ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ರಸ್ತೆ ಸಮಸ್ಯೆ ಒಂದೆಡೆಯಾದರೆ, ಅವಸರದ ಚಾಲನೆ ಕೂಡಾ ಇದಕ್ಕೆ ಕಾರಣವಾಗಿರಬಹುದು. ಇದೀಗ ಮತ್ತೆ ಸರಣಿ ಅಪಘಾತವೊಂದು ನಡೆದಿದ್ದು ಶಾಲಾ ವಿದ್ಯಾರ್ಥಿಗಳಿದ್ದ ಖಾಸಗಿ ಬಸ್ ಪಲ್ಟಿ ಆಗಿದೆ. 

 

ನಡೆದಿದ್ದೇನು..?

 

ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪದ ಅಡ್ಡಹೊಳೆ ಎಂಬಲ್ಲಿ ಬೆಳ್ಳಂಬೆಳಗ್ಗೆ ಸರಣಿ ಅಪಘಾತವೊಂದು ಸಂಭವಿಸಿದೆ. ಕುಂದಾಪುರ ಪ್ರವಾಸಕ್ಕೆ ತೆರಳಿ ಹಿಂದಿರುಗುತ್ತಿದ್ದ ಬೆಂಗಳೂರು ಕಾಲೇಜು ವಿದ್ಯಾರ್ಥಿಗಳಿದ್ದ ಖಾಸಗಿ ಟೂರಿಸ್ಟ್ ಬಸ್ ಏಕಾಏಕಿ ಉರುಳಿ ಬಿದ್ದಿದೆ. ಇಂದು ಬೆಳಗಿನ ಜಾವ ಕಾರೊಂದು ಹಿಂದಿನಿಂದ ಬಂದು ಕೆಎಸ್‌ಆರ್‌ಟಿಸಿ ಬಸ್‌ಗೆ ಢಿಕ್ಕಿ ಹೊಡೆದಿದ್ದು ನಂತರ, ಬೆಂಗಳೂರು ಕಾಲೇಜು ವಿದ್ಯಾರ್ಥಿಗಳಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್‌ಗೆ ಗುದ್ದಿದೆ. 

 

ರಸ್ತೆಗೆ ಉರುಳಿ ಬಿದ್ದ ಬಸ್, ವಿದ್ಯಾರ್ಥಿಗಳಿಗೆ ಗಾಯ..!

 

ಟೂರಿಸ್ಟ್ ಬಸ್ ರಸ್ತೆಗೆ ಉರುಳಿ ಬಿದ್ದಿದ್ದು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ನೆಲ್ಯಾಡಿ ಮತ್ತು ಕಡಬದ ಖಾಸಗಿ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಉಪ್ಪಿನಂಗಡಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಯಾರಿಗೂ ಯಾವುದೇ ರೀತಿಯ ಪ್ರಾಣ ಹಾನಿ ಸಂಭವಿಸಿಲ್ಲ.