ಷಷ್ಠಿ ಸಂಭ್ರಮದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ಪೇಟೆಯಲ್ಲಿ ಒಂಟಿ ಸಲಗ ಓಡಾಟ...!! ದಂಗಾದ ಸ್ಥಳೀಯರು...!

  • 02 Dec 2024 11:03:11 AM

ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಚಂಪಾಷಷ್ಠಿ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಜಾತ್ರಾ ಸಂಭ್ರಮ ಕಳೆಗಟ್ಟಿದೆ. ಬೀದಿ ದೀಪಾಲಂಕಾರದೊಂದಿಗೆ ಸುಬ್ರಹ್ಮಣ್ಯ ದೇಗುಲ ಪ್ರದೇಶ ಕಂಗೊಳಿಸುತ್ತಿದೆ. ಹೀಗಿರುವಾಗ ಇದೀಗ ಅದೇ ಕುಕ್ಕೆ ಸುಬ್ರಹ್ಮಣ್ಯ ಪೇಟೆಗೆ ಆನೆಯೊಂದು ಎಂಟ್ರಿ ಕೊಟ್ಟಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. 

 

ಸುಬ್ರಹ್ಮಣ್ಯ ದೇಗುಲದ ಸಮೀಪ ಒಂಟಿಸಲಗ ಸಂಚಾರ...!

 

ಕುಕ್ಕೆ ಸುಬ್ರಹ್ಮಣ್ಯ ದೇಗುಲ ಸಮೀಪ ದೇವರಗದ್ದೆ ಅರಣ್ಯ ಪ್ರದೇಶದ ಭಾಗದಿಂದ ಒಂಟಿ ಸಲಗ ಆಗಮಿಸಿದೆ. ಮಠದ ಬಳಿ ತಿರುಗಾಡಿದ ಆನೆ ನಂತರ ಅರಣ್ಯ ಭಾಗಕ್ಕೆ ತೆರಳಿದೆ. ಕಾಡಾನೆ ಸಂಚರಿಸುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜನಸಂಚಾರ ಇರುವ ಪ್ರದೇಶದಲ್ಲಿ ಆನೆ ಓಡಾಟ ನಡೆಸಿದ್ದರಿಂದ ಜನ ಆತಂಕಕ್ಕೆ ಒಳಗಾಗಿದ್ದರು. ಈ ಮಾಹಿತಿ ತಿಳಿದ ಕೂಡಲೇ ಪುತ್ತೂರು ಎ.ಸಿ ಜುಬಿನ್ ಮೊಹಪಾತ್ರ ಆನೆಯನ್ನು ಕೂಡಲೇ ಕಾಡಿಗೆ ಕಳುಹಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆಯನ್ನು ನೀಡಿದ್ದಾರೆ. 

 

ದೇಗುಲದ ಬಳಿಯೇ ಮೊಕ್ಕಾಂ ಹೂಡಿದ ಅರಣ್ಯ ಇಲಾಖೆ ಸಿಬ್ಬಂದಿ..!!

 

ಬೀದಿದೀಪ, ಜನಸಂಚಾರ ನೋಡಿ ಒಮ್ಮೆಲೆ ಆನೆ ದಿಕ್ಕಾಪಾಲಾಗಿ ಭಯದಿಂದ ಓಡಿಹೋಗಿತ್ತು. ಕಾಡಾನೆ ಯಾರಿಗೂ ಯಾವುದೇ ರೀತಿಯಲ್ಲಿ ತೊಂದರೆ ನೀಡದೆ ಬಂದ ಹಾದಿ ಹಿಡಿದು ಕಾಡಿಗೆ ಮರಳಿದ ಮೇಲೆ ಜನರು ನಿಟ್ಟುಸಿರು ಬಿಟ್ಟರು. ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಅರಣ್ಯ ಇಲಾಖೆ ಸಿಬ್ಬಂದಿ ದೇಗುಲದ ಸಮೀಪದಲ್ಲೇ ಮೊಕ್ಕಾಂ ಹೂಡಿದ್ದಾರೆ. ರಾತ್ರಿ ವೇಳೆ ದೇಗುಲಕ್ಕೆ ಬರುವ ಭಕ್ತರು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ.