ನಾಳೆ ಡಿವೈಎಸ್ಪಿ ಚಾರ್ಜ್ ತೆಗೆದುಕೊಳ್ಳಬೇಕಿದ್ದ ಅಧಿಕಾರಿ ಬಾಳಲ್ಲಿ ಕಂಡು‌ಕೇಳರಿಯದ ದುರಂತ!; ಇಡೀ ರಾಜ್ಯಕ್ಕೆ ಶಾಕ್ ನೀಡಿದ ಈ‌ ಅಪಘಾತಕ್ಕೆ ಕಾರಣವೇನು ಗೊತ್ತಾ?

  • 02 Dec 2024 04:13:58 PM

ಹಾಸನ: ಕಷ್ಟಪಟ್ಟು ಕಲಿತು ಐಪಿಎಸ್, ಐಎಎಸ್ ಅಧಿಕಾರಿ ಆಗೋದಂದ್ರೆ ಸಾಮಾನ್ಯವಲ್ಲ. ಅದಕ್ಕೆ ಹಗಲಿರುಳು ಕಷ್ಟಪಡಬೇಕಾಗುತ್ತದೆ. ಹಾಗೆ ಕಷ್ಟಪಟ್ಟು ಅಧಿಕಾರಿ ಹುದ್ದೆಯನ್ನು ಅಲಂಕರಿಸಿದಾಗ ಆಗುವ ಆತ್ಮತೃಪ್ತಿ, ಸಂತೋಷಕ್ಕೆ ಪಾರವೇ ಇರದು. ಅದರಂತೆ ಇಲ್ಲೊಬ್ಬ ಯುವಕ ಐಪಿಎಸ್ ಅಧಿಕಾರಿ ಆಗಿ ಇನ್ನೇನು ಮತ್ತೊಂದು ದೊಡ್ಡ ಹುದ್ದೆಗೆ ವರ್ಗಾವಣೆಯಾಗಬೇಕು ಎನ್ನುವಷ್ಟರಲ್ಲಿ ಆತನ ಬದುಕಿನಲ್ಲಿ ಎಲ್ಲವೂ ಉಲ್ಟಾಪಲ್ಟಾ ಆಗಿದೆ. ಅವರ ಬಾಳಲ್ಲಿ ಯಮರಾಯ ಆಗಮಿಸಿದ್ದಾನೆ. ಅದೆಷ್ಟೋ ಕನಸುಗಳನ್ನು ಹೊಂದಿದ್ದ ಈತನ ಬದುಕು ದುರಂತ ಅಂತ್ಯ ಕಂಡಿದೆ. 

 

ಅಪಘಾತದಲ್ಲಿ ದುರಂತ ಅಂತ್ಯ ಕಂಡ ಯುವ ಐಪಿಎಸ್ ಅಧಿಕಾರಿ..!

 

ಮೈಸೂರಿಗೆ ತೆರಳಿ, ಅಲ್ಲಿಂದ ಹಾಸನಕ್ಕೆ ಮರಳುತ್ತಿದ್ದಂತ ಸಂದರ್ಭ ಕಾರು ಅಪಘಾತಗೊಂಡು ಯುವ ಐಪಿಎಸ್ ಅಧಿಕಾರಿ ಗಂಭೀರವಾಗಿ ಗಾಯಗೊಂಡು ದಾರುಣ ಅಂತ್ಯ ಕಂಡ ಘಟನೆ ಹಾಸನ ತಾಲ್ಲೂಕಿನ ಕಿತ್ತಾನೆಗಡಿ ಗ್ರಾಮದ ಬಳಿ ನಡೆದಿದೆ. ಮೃತಪಟ್ಟ ಯುವ ಐಪಿಎಸ್ ಅಧಿಕಾರಿಯನ್ನು ಹರ್ಷವರ್ಧನ್ ಎಂದು ಗುರುತಿಸಲಾಗಿದೆ. ಮೈಸೂರಿನಲ್ಲಿ ಐಜಿಪಿಯವರನ್ನು ಭೇಟಿಯಾಗಿ ಹಾಸನ ಡಿವೈಎಸ್ಪಿಯಾಗಿ ವರ್ಗಾವಣೆಯಾಗಿದ್ದ ಕಾರಣ, ವರದಿ ಮಾಡಿಕೊಳ್ಳಲು ಜಿಲ್ಲಾ ಪೊಲೀಸ್ ಕಚೇರಿಗೆ ಯುವ ಐಪಿಎಸ್ ಅಧಿಕಾರಿ ಹರ್ಷವರ್ಧನ್ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ಈ ಅಪಘಾತದಲ್ಲಿ ಐಪಿಎಸ್ ಅಧಿಕಾರಿ ಹರ್ಷವರ್ಧನ್ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಚಿಕಿತ್ಸೆ ಫಲಕಾರಿಯಾದೆ ಅವರು ಮೃತಪಟ್ಟಿದ್ದಾರೆ. 

 

ನಿನ್ನೆಯಷ್ಟೇ ಹರ್ಷವರ್ಧನ್ ಟ್ರೈನಿಂಗ್ ಮುಗಿಸಿದ್ದರು..!

 

ಇಪ್ಪತ್ತಾರು ವರ್ಷದ ಹರ್ಷವರ್ಧನ್ ಅವರ ಬಾಳಲ್ಲಿ ವಿಧಿಯಾಟ ಕ್ರೂರವಾಗಿತ್ತು. ಹಾಸನದ ಎಸ್‌ಪಿ ಕಚೇರಿಯಲ್ಲಿ ಅಧಿಕಾರ ಸ್ವೀಕಾರಕ್ಕೆ ಆಗಮಿಸುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಮೈಸೂರಿನ ಪೊಲೀಸ್ ಅಕಾಡೆಮಿಯಿಂದ ಹಾಸನದ ಕಡೆ ಬರುತ್ತಿದ್ದ ವೇಳೆ ಪೊಲೀಸ್ ಜೀಪು ದಿಢೀರನೆ ಅಪಘಾತಕ್ಕೀಡಾಗಿದ್ದು ಇವರಿಗೆ ತೀವ್ರ ತೆರನಾದ ಗಂಭೀರ ಗಾಯಗಳಾಗಿತ್ತು. ಕೂಡಲೇ ಅವರ ಜೀವ ಉಳಿಸಲು ಏನೆಲ್ಲಾ ಶತ ಪ್ರಯತ್ನಗಳನ್ನು ನಡೆಸಿದರೂ ಕೂಡಾ ಯಾವುದೇ ಪ್ರಯೋಜನವಾಗಲಿಲ್ಲ. ಐಪಿಎಸ್ ವೃತ್ತಿ ಜೀವನ ಆರಂಭಿಸಿದ ಮೊದಲ ದಿನವೇ ಹರ್ಷವರ್ದನ್ ಅಸುನೀಗಿದ್ದಾರೆ. ನಿನ್ನೆಯಷ್ಟೇ ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ಟ್ರೇನಿಂಗ್ ಮುಗಿಸಿದ್ದರು. ಪ್ರೊಬೆಷನರಿ ಐಪಿಎಸ್ ಅಧಿಕಾರಿಯಾಗಿ ಇವತ್ತು ಹಾಸನದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಡಿವೈಎಸ್‌ಪಿಯಾಗಿ ಚಾರ್ಜ್ ತೆಗೆದುಕೊಳ್ಳಬೇಕಿತ್ತು. ಐಜಿಪಿ ಬೋರಲಿಂಗಯ್ಯ ರಿಪೋರ್ಟ್ ಮಾಡಿಕೊಂಡು ಹಾಸನಕ್ಕೆ ಜೀಪ್‌ನಲ್ಲಿ ಬರುತ್ತಿದ್ದರು. ಇನ್ನೇನು ಕೆಲವೇ ನಿಮಿಷಗಳಲ್ಲಿ ಹಾಸನ ತಲುಪಬೇಕು ಅನ್ನುವಷ್ಟರಲ್ಲಿ ಈ ದುರಂತ ಸಂಭವಿಸಿದ್ದು ಪೊಲೀಸ್ ಇಲಾಖೆ, ಸ್ಥಳೀಯರು ಕೂಡಾ ಈ ದುರ್ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮೂಲತಃ ಬಿಹಾರದ ಹರ್ಷಬರ್ದನ್‌ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ವಾಸವಾಗಿದ್ದ ಇವರು ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪಾಸ್ ಮಾಡಿಕೊಂಡಿದ್ದರಂತೆ..