ತಲ್ಲೂರು: ಕರಾವಳಿಯ ಅತ್ಯಂತ ಸಾಂಪ್ರದಾಯಿಕ ಪ್ರಾಚೀನ ಕ್ರೀಡೆಗಳಲ್ಲಿ ಕಂಬಳ ಕೂಡಾ ಒಂದು. ದ.ಕ ಜಿಲ್ಲೆಯಲ್ಲಿ ಕಂಬಳದ ಕೋಣಗಳಿಗೆ ಅದೆಷ್ಟೋ ಸಾವಿರ ಮಂದಿ ಅಭಿಮಾನಿಗಳಿದ್ದಾರೆ. ಇಂದಿಗೂ ಕೂಡಾ ಹಲವಾರು ಕಡೆ ಕಂಬಳ ಕ್ರೀಡೆ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ಇಂದು ಇತಿಹಾಸ ಪ್ರಸಿದ್ಧ ತಲ್ಲೂರು ಕಂಬಳ ಪ್ರಾರಂಭವಾಗಲಿದೆ.
ತಲ್ಲೂರು ದೊಡ್ಮನೆ ಕಂಬಳ ಇಂದಿನಿಂದ ಶುರು...
ತಲ್ಲೂರಿನ ದೊಡ್ಮನೆ ಕುಟುಂಬದವರು ಅನಾದಿ ಕಾಲದಿಂದಲೂ ತಲ್ಲೂರು ದೊಡ್ಮನೆ ಕಂಬಳವನ್ನು ಶಾಸ್ತೋಕ್ತವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇತಿಹಾಸ ಪ್ರಸಿದ್ಧ ತಲ್ಲೂರು ಕಂಬಳ ಈ ಬಾರಿ ಡಿ. 4ರಂದು ಅಂದರೆ ಇಂದು ನಡೆಯಲಿದೆ. ತಲ್ಲೂರಿನ ದೊಡ್ಮನೆ ಕಂಬಳ್ಳೋತ್ಸವದಲ್ಲಿ ಇಂದಿಗೂ ವಿಶಿಷ್ಟ ಪಾರಂಪರಿಕ ಆಚರಣೆ, ಧಾರ್ಮಿಕ ವಿಧಿಗಳು ನಡೆಯುತ್ತಿದೆ. ಬೇರೆಲ್ಲೂ ಇರದಂತಹ ವಿಶಿಷ್ಟ ಆಚರಣೆಯೊಂದು ಇಲ್ಲಿದೆ. ಕಂಬಳದ ಮರುದಿನ ತಲ್ಲೂರಿನ ಗರಡಿಯಲ್ಲಿ “ಕಾಯ್ದ ಪೂಜೆ’ ನಡೆಯುವುದು ಅತ್ಯಂತ ವಿಶೇಷ. ಇದನ್ನು ವೀಕ್ಷಿಸಲು ಸಾವಿರಾರು ಜನ ಆಗಮಿಸುತ್ತಾರೆ.
ಕಾಯ್ದ ಪೂಜೆ ಅಂದ್ರೆ ಏನು..?
ಕೊಡಿ ತಿಂಗಳು ಎಂದು ಆಡುಭಾಷೆಯಲ್ಲಿ ಕರೆಯಲಾಗುವ ವೃಶ್ಚಿಕ ಸಂಕ್ರಮಣ ದಿನ ಈ ಕಂಬಳಕ್ಕೆ ಭಾರೀ ವಿಶೇಷ. ಯಾಕೆಂದರೆ ಈ ದಿನ ಪುರೋಹಿತರು ದೊಡ್ಮನೆಗೆ ಬಂದು ತಲ್ಲೂರು ಕಂಬಳದ ದಿನ ನಿಗದಿಪಡಿಸುತ್ತಾರೆ. ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವರ ತಾರಾನೂಕೂಲಕ್ಕೆ ಹೊಂದಿಕೊಂಡು ಕಂಬಳ ದಿನ ನಿಗದಿಯಾಗುತ್ತದೆ. ಕಂಬಳ ಆರಂಭದ ಮುಹೂರ್ತದ ಸಮಯವನ್ನು, ಮರುದಿನ ನಡೆಯುವ ಕಾಯ್ದ ಪೂಜೆಗೂ ಒಂದು ನಿರ್ದಿಷ್ಟ ಮುಹೂರ್ತ ನಿಗದಪಡಿಸಲಾಗುತ್ತದೆ. ದಿನ ನಿಗದಿಪಡಿಸಿದ ಮುಹೂರ್ತದಲ್ಲಿ ತುಳಸಿ ಕಟ್ಟೆ ವೃಂದಾವನ ಮಾಡಿ, ತುಳಸಿ ಪೂಜೆ ಮಾಡಲಾಗುತ್ತದೆ. ದೊಡ್ಮನೆ ಕುಟುಂಬದವರು ನೀಡಿರುವ ಹೊಸ ಭತ್ತದ ಅಕ್ಕಿಯಲ್ಲಿ ಸಸ್ಯಹಾರ ಅಡುಗೆ ತಯಾರಿಸಿ, ದೈವಗಳಿಗೆ ಅಗೇಲು ಸೇವೆಯನ್ನು ಮಾಡಿ, ಬಡಿಸಲಾಗುತ್ತದೆ. ಇದನ್ನೇ “ಕಾಯ್ದ ಪೂಜೆ’ ಎಂದು ಹೇಳಲಾಗುತ್ತದೆ. ಅದೇ ದಿನ ಪೂಜಾರಿಯವರು ಹೊಸ ಅಕ್ಕಿಯ ಊಟ ಮಾಡುತ್ತಾರೆ.
ಕಂಬಳದ ದಿನ ಬೆಳಗ್ಗೆ ಮನೆ ದೇವರು, ದೈವಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲಿಂದ ಕಂಬಳ ಗದ್ದೆಗೆ ಮೆರವಣಿಗೆಯಲ್ಲಿ ಬಂದು, ನಿಗದಿಪಡಿಸಿದ ಮುಹೂರ್ತದಲ್ಲಿ ಗದ್ದೆಗಳಿಗೆ ಕೋಣಗಳನ್ನು ಇಳಿಸಲಾಗುತ್ತದೆ. ಸಂಜೆ ಕಂಬಳ ಕೊನೆಯದಾಗಿ ದೊಡ್ಮನೆಯ ಕೋಣಗಳನ್ನು ಗದ್ದೆಗೆ ಇಳಿಸಿ, ಓಡಿಸಿದ ಬಳಿಕ ಬೆನ್ನುಗಾಯಿ ಒಡೆಯುವುದರೊಂದಿಗೆ ಕಂಬಳ ಸಮಾಪ್ತಿಯಾಗುತ್ತದೆ.
150 ವರ್ಷಗಳ ಇತಿಹಾಸವಿರುವ ದೊಡ್ಮನೆ ಕಂಬಳ...
ಮೂಡ್ಲಕಟ್ಟೆ ದೊಡ್ಮನೆ ಕಂಬಳಕ್ಕೆ ಸುಮಾರು 150 ವರ್ಷಗಳ ಇತಿಹಾಸವಿದೆ. ದೊಡ್ಮನೆಯ ಯಜಮಾನ ಮಹಾಬಲ ಶೆಟ್ಟಿಯವರು ಇದರ ನೇತೃತ್ವ ವಹಿಸುತ್ತಿದ್ದರು. ಕಳೆದ 57 ವರ್ಷಗಳಿಂದ ದೊಡ್ಮನೆಯ ಯಜಮಾನ ಡಾ. ಜಿ.ಪಿ ಶೆಟ್ಟಿ ಕಂಬಳದ ಸಂಪೂರ್ಣ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಈ ಕಂಬಳದ ಮತ್ತೊಂದು ವಿಶೇಷವೆಂದರೆ ಹಿಂದಿನಿಂದಲೂ ಕೋಣ ತಂದ ಪ್ರತಿಯೊಬ್ಬರಿಗೂ 2500ರೂ. ಹಣ ನೀಡುವ ಪರಿಪಾಠವಿದೆ