ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಕೊಡಗಿನಲ್ಲಿ ಏಕಕಾಲಕ್ಕೆ ಎನ್ಐಎ ದಾಳಿ!

  • 05 Dec 2024 08:27:01 PM

ಕೊಡಗು:ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್.ಐ.ಎ) ಇಂದು ಬೆಳಿಗ್ಗೆ ಏಕ ಕಾಲಕ್ಕೆ ಕೊಡಗಿನ ಹಲವು ಕಡೆ ದಾಳಿ ನಡೆಸಿದೆ. ಮಡಿಕೇರಿಯ ಮುಸ್ತಾಫಾ (ಚಿಲ್ಲಿ), ಸೋಮವಾರಪೇಟೆಯ ಹೊಸತೋಟ ನಿವಾಸಿ ಹಾಗೂ ಕಾಫಿ ವ್ಯಾಪಾರೀ ಜುನೈದ್, ಚೌಡ್ಲು ಗ್ರಾಮದ ತೌಶಿಕ್, ಮತ್ತು ಸುಂಟಿಕೊಪ್ಪದ ಹನೀಫ್ ಅವರ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿತ್ತು. ಈ ದಾಳಿಯು ಪ್ರವೀಣ್ ನೆಟ್ಟಾರು ಪ್ರಕರಣದ ಪ್ರಮುಖ ವಿಚಾರಗಳನ್ನು ಹೊರತರುವ ಉದ್ದೇಶದಿಂದ ನಡೆಸಲಾಗಿತ್ತು ಎಂದು ತಿಳಿದು ಬಂದಿದೆ.

 

 ಈ ದಾಳಿಯು ಸುಮಾರು ಮೂರು ಗಂಟೆಗಳ ಕಾಲ ನಡೆಯಿತು. ದಾಖಲೆಗಳ ಪರಿಶೀಲನೆಯ ಜೊತೆಗೆ ವಿಚಾರಣೆಯನ್ನೂ ನಡೆಸಿದ್ದಾರೆ. ಈ ದಾಳಿಯ ಪ್ರಮುಖ ಉದ್ದೇಶ ಆರೋಪಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಮತ್ತು ಮಾಹಿತಿಗಳನ್ನು ಸಂಗ್ರಹಿಸುವುದಾಗಿತ್ತು. ಇದು ತನಿಖಾ ಪ್ರಕ್ರಿಯೆಯ ಭಾಗವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

2022ರಲ್ಲಿ ನಡೆದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವು ದೇಶಾದ್ಯಾಂತ ಆಘಾತವನ್ನು ಸೃಷ್ಟಿಸಿತ್ತು.ಈ ಪ್ರಕರಣದ ಹಿಂದೆ ಉಗ್ರ ಸಂಘಟನೆಗಳ ಕೈವಾಡವಿದೆಯೋ ಎನ್ನುವ ಶಂಕೆಯ ಹಿನ್ನೆಲೆಯಲ್ಲಿ, ತನಿಖೆಯನ್ನು ಎನ್.ಐ.ಎ.ಗೆ ಹಸ್ತಾಂತರಿಸಲಾಗಿದೆ. ಅದರ ಕುರಿತಾಗಿ ಇದೀಗ ಎಲ್ಲೆಡೆ ದಾಳಿ ಪ್ರಕ್ರಿಯೆ ನಡೆಯುತ್ತಿದೆ.

 

ಈ ಅಮಾನವೀಯ ಕೃತ್ಯದ ಹಿಂದಿನ ದುಷ್ಕರ್ಮಿಗಳ ಕೈವಾಡ ಬೆಳಕಿಗೆ ಬಂದು, ಪ್ರವೀಣ್ ನೆಟ್ಟಾರರಿಗೆ ನ್ಯಾಯ ದೊರಕಲಿ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಈ ಹಿಂಸಾತ್ಮಕ ಘಟನೆಗೆ ನ್ಯಾಯ ದೊರಕುವ ಮೂಲಕ, ಸಮಾಜದಲ್ಲಿ ಸತ್ಯ ಮತ್ತು ನ್ಯಾಯದ ಸ್ಥಾಪನೆಗೆ ಇದು ಪಾಠವಾಗಲಿ ಎಂಬುದೇ ಎಲ್ಲರ ಹಾರೈಕೆ.