ಮಂಗಳೂರು:ಪ್ರೀತಿಗೆ ಕಣ್ಣಿಲ್ಲ ಅಂತಾರೆ ಪ್ರಾಯದ, ಜಾತಿ, ಧರ್ಮದ ಹಂಗಿಲ್ಲದೆ ಇದ್ದಕಿದ್ದ ಹಾಗೆ ಒಬ್ಬರ ಮೇಲೆ ಪ್ರೇಮಾಂಕುರವಾಗಿಬಿಡುತ್ತೆ. ಈ ಪ್ರೀತಿ ಕೆಲವರನ್ನು ಜೀವನದಲ್ಲಿ ಒಳ್ಳೆಯ ಸ್ಥಾನಕ್ಕೇರಿಸಿದರೆ ಇನ್ನೂ ಕೆಲವರ ಜೀವನ ಇದರಿಂದಲೇ ಹಾಳಾಗುತ್ತದೆ. ಅದೇನೇ ಇರಲಿ ಇಲ್ಲೊಂದು ಅಪರೂಪದ ಜೋಡಿಯ ಪ್ರೀತಿಗೆ ಶಹಬ್ಬಾಸ್ ಅನ್ನಲೇಬೇಕು...ಯಾಕಂತೀರಾ ಈ ಸ್ಟೋರಿ ನೋಡಿ..
ಥೈಲ್ಯಾಂಡ್ ಯುವತಿಯ ಕೈ ಹಿಡಿದ ಮಂಗ್ಳೂರು ಯುವಕ..!
ಮಂಗಳೂರಿನ ಯುವಕ ಪೃಥ್ವಿರಾಜ್ ಎಂಬವರು ಥೈಲ್ಯಾಂಡ್ ದೇಶದ ಯುವತಿಯನ್ನು ವಿವಾಹವಾಗಿದ್ದಾರೆ. ಭಾರತೀಯ ಸಂಪ್ರದಾಯದಂತೆ ಅವರು ನಿನ್ನೆ ವೈವಾಹಿಕ ಜೀವನಕ್ಕೆ ಕೂಡಾ ಕಾಲಿರಿಸಿದ್ದಾರೆ. ಇವರ ವಿವಾಹಕ್ಕೆ ಪೃಥ್ವಿರಾಜ್ ಅವರ ಪೋಷಕರು, ಸ್ನೇಹಿತರು ಸಾಕ್ಷಿಯಾದ್ರು. ಶ್ರೀಮಂಗಳಾದೇವಿ ದೇವಸ್ಥಾನದಲ್ಲಿ ಗುರು-ಹಿರಿಯರ ಸಮ್ಮುಖದಲ್ಲಿ ಮದುವೆ ನಡೆದಿದ್ದು ಡಿ.7ರಂದು ಅಡ್ಯಾರ್ ಗಾರ್ಡನ್‌ನಲ್ಲಿ ಅದ್ದೂರಿ ರಿಸೆಪ್ಷನ್ ಕೂಡಾ ನಡೆಯಲಿದೆ. ಇನ್ನು ಮುಂದೆ ಮೊಂತಕಾನ್ ಥೈಲ್ಯಾಂಡ್ ತೊರೆದು ಭಾರತೀಯ ಸೊಸೆಯಾಗಲಿದ್ದಾರೆ. ಈ ಬಗ್ಗೆ ಅವರು ಕೂಡಾ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಇವರಿಬ್ಬರ ನಡುವೆ ಪ್ರೇಮಾಂಕುರವಾಗಿದ್ದು ಹೇಗೆ..?
ವಕೀಲೆ ಸುಜಯಾ ಸತೀಶ್ ಹಾಗೂ ಸತೀಶ್ ಕುಮಾರ್ ಅವರ ಪ್ರೀತಿಯ ಪುತ್ರ ಪೃಥ್ವಿರಾಜ್. ಅವರು ಬೆಂಗಳೂರಿನಲ್ಲಿ ತಮ್ಮದೇ ಸಾಫ್ಟ್‌ವೇರ್ ಕಂಪೆನಿಯನ್ನು ಹೊಂದಿದ್ದಾರೆ. ಇವರ ಸಂಸ್ಥೆ ಟಾಟಾ, ಪೋರ್ಸ್ ಮುಂತಾದ ಕಂಪೆನಿಗಳಿಗೆ ಸಾಫ್ಟ್‌ವೇರ್ ಸರ್ವೀಸ್ ಕೂಡಾ ಒದಗಿಸುತ್ತದೆ. ಹೀಗೆ ಒಂದು ಬಾರಿ ಪ್ರಾಜೆಕ್ಟ್ ಮೇಲೆ ಥೈಲ್ಯಾಂಡ್ ದೇಶಕ್ಕೆ ಹೋಗಿದ್ದಾಗ ಪೃಥ್ವಿರಾಜ್‌ಗೆ ಪ್ರೇಮಿಗಳ ದಿನದಂದೇ ಮೊಂತಕನ್ ಸಸೂಕ್ ಪರಿಚಯವಾಗಿದ್ದಾರೆ. ಅವರನ್ನು ನೋಡಿದ್ದೇ ಪೃಥ್ವಿರಾಜ್‌ಗೆ ಅದೇನೋ ಒಂದು ತೆರನಾದ ಹೊಸದಾದ ಭಾವ ಚಿಗುರೊಡೆದಿದೆ. ನಂತರ ಅದನ್ನು ನೇರವಾಗಿ ಇವರಲ್ಲಿ ಹೇಳಿದಾಗ ಮೊಂತಕನ್ ಕೂಡಾ ಇವರ ಪ್ರೀತಿಯನ್ನು ಒಪ್ಪಿದ್ದಾರೆ. ಪ್ರೀತಿ ಗಟ್ಟಿಗೊಳ್ಳುತ್ತಿದ್ದಂತೆ ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ. ಊರಿಗೆ ಬಂದು ತಾನು ಥೈಲ್ಯಾಂಡ್ ಯುವತಿಯನ್ನು ಮದುವೆಯಾಗುತ್ತೇನೆ ಎಂದು ಪೃಥ್ವಿರಾಜ್ ಹೆತ್ತವರಿಗೆ ತಿಳಿಸಿದಾಗ ಅವರು ಮೊದಲು ಒಮ್ಮೆಲೆ ಶಾಕ್ ಗೆ ಒಳಗಾಗಿದ್ದರು.ಅಷ್ಟೇ ಅಲ್ಲದೆ ಮಗನ ಭವಿಷ್ಯದ ಬಗ್ಗೆ ಗೊಂದಲಕ್ಕೊಳಗಾಗಿದ್ದರು. ಆಮೇಲೆ ಪ್ರೀತಿಗೆ ಅಸ್ತು ಅಂದಿದ್ದಾರೆ. ಇತ್ತ ಮೊಂತಕನ್ ಮನೆಯಲ್ಲೂ ವಿವಾಹಕ್ಕೆ ಸಮ್ಮತಿ ದೊರೆತಿದ್ದು, ಇಬ್ಬರಿಗೂ ಥೈಲ್ಯಾಂಡ್‌ನಲ್ಲಿ ಅಲ್ಲಿನ ಪದ್ಧತಿಯಂತೆ ಜುಲೈನಲ್ಲಿ ವಿವಾಹ ನೆರವೇರಿದೆ.
ತನ್ನ ಮದ್ವೆ ಬಗ್ಗೆ ಪೃಥ್ವಿರಾಜ್ ಹೇಳಿದ್ದೇನು ಗೊತ್ತಾ..?
"ನನ್ನ ಜೀವನದಲ್ಲಿ ನಡೆಧ್ದು ಎಲ್ಲವೂ ಅಚಾನಕ್ ಆಗಿಯೇ. ನಾನು ಥೈಲ್ಯಾಂಡ್ಗೆ ಹೋಗಿದ್ದೆ. ವಾಲೈಂಟೈನ್ಸ್ ಡೇ ದಿನ ಇವರು ನನಗೆ ಪರಿಚಯವಾದರು. ಆ ಬಳಿಕ ನಾವು ಮದುವೆಯಾಗಲು ತೀರ್ಮಾನಿಸಿದೆವು. ಹೆತ್ತವರಿಗೆ ಕೂಡ ಖುಷಿಯಾಗಿದೆ. ಈ ವಿಚಾರ ಮೊದಲಿಗೆ ಹೇಳಿದಾಗ ಶಾಕ್ ಆದ್ರು. ಆದರೆ ಕೆಲ ಸಮಯದ ಬಳಿಕ ಒಪ್ಪಿಕೊಂಡರು. ನನಗೆ ಥೈಲ್ಯಾಂಡ್ ಭಾಷೆಯ ಸ್ವಲ್ಪ ಕೀ ವರ್ಡ್ಸ್ ಬರುತ್ತದೆ. ಅವರಿಗೂ ತುಳುವಿನ ಸ್ವಲ್ಪ ಕೀ ವರ್ಡ್ಸ್ ಬರುತ್ತದೆ. ಇನ್ನು ಇಬ್ಬರು ಸೇರಿ ಇಬ್ಬರ ಭಾಷೆಯನ್ನು ನಿರರ್ಗಳವಾಗಿ ಮಾತನಾಡಲು ಕಲಿಯುತ್ತೇವೆ. ಇಂತಹ ಸಂಗಾತಿ ಸಿಕ್ಕಿದ್ದು ನನ್ನ ಭಾಗ್ಯ' ಎಂದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿಕೊಂಡಿದ್ದಾರೆ.