ಅಯೋಧ್ಯಾ: ಕಳೆದ 500 ವರ್ಷಗಳ ಹಿಂದೆ ಮಹಾನ್ ಕ್ರೂರಿ, ಮೊಘಲ್ ದೊರೆ ಬಾಬರ್ ಅಯೋಧ್ಯೆಯಲ್ಲಿ ಯಾವ ಕೃತ್ಯ ಎಸಗಿದ್ದನೋ, ಅಂಥಹದ್ದೇ ಕೃತ್ಯ ಇದೀಗ ನೆರೆಯ ಬಾಂಗ್ಲಾದೇಶ ಹಾಗೂ ಸಂಭಲ್ ನಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಹೇಳಿಕೆಯ ವಿಡಿಯೋ ಸದ್ಯ, ವೈರಲ್ ಆಗುತ್ತಿದೆ.
ಅಯೋಧ್ಯೆಯಲ್ಲಿ ಗುಡುಗಿದ ಯೋಗಿ!
ಇತ್ತೀಚೆಗೆ ಅಯೋಧ್ಯೆಯಲ್ಲಿ ರಾಮಾಯಣ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಯೋಗಿ, 'ಮೊಘಲ್ ದೊರೆ ಬಾಬರ್ ಕಾಲದಲ್ಲಿ ಹಿಂದೂಗಳ ದೇಗುಲ, ಪ್ರಾರ್ಥನಾ ಮಂದಿರ ಹಾಗೂ ಸಮುದಾಯಗಳ ಮೇಲೆ ನಿರಂತರ ದಾಳಿ ನಡೆಸಲಾಗಿತ್ತು. ಇದೀಗ ಅಲ್ಪಸ್ವಲ್ಪ ಉಳಿದುಕೊಂಡಿರುವ ಬಾಬರ್ ಡಿಎನ್ಎ ಗಳು ಬಾಂಗ್ಲಾ ಹಾಗೂ ಸಂಭಲ್‌ನಲ್ಲಿ ದಾಳಿ ನಡೆಸುತ್ತಿವೆ' ಎಂದಿದ್ದಾರೆ.
ಮಾತು ಮುಂದುವರೆಸಿದ ಯೋಗಿ,'ಭಾರತೀಯರು ಒಗ್ಗಟ್ಟಿಗೆ ಪ್ರಾಮುಖ್ಯತೆ ನೀಡಿದ್ದರೆ, ಒಗ್ಗಟ್ಟಿನಲ್ಲಿ ಹೋರಾಡಿದ್ದರೆ ಬೆರಳೆಣಿಕೆಯಷ್ಟಿದ್ದ ಬಾಬರ್ ಸೈನ್ಯ ಭಾರತವನ್ನು ಹಾಳು ಮಾಡುತ್ತಿರಲಿಲ್ಲ. ನಮ್ಮ ಪವಿತ್ರ ಕ್ಷೇತ್ರಗಳು ಹಾಳಾಗುತ್ತಿರಲಿಲ್ಲ. ಇನ್ನಾದರೂ ನಾವು ಒಗ್ಗಟ್ಟಾಗಬೇಕು' ಎಂದಿದ್ದಾರೆ.