ದ.ಕ: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಸಹಾಯಕರಿಗೆ, ಪರಿಶಿಷ್ಟ ವರ್ಗದವರಿಗೆ ಒಂದಲ್ಲ ಒಂದು ರೀತಿಯ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿರುತ್ತದೆ..ಅದರಂತೆ ರಾಜ್ಯದ ನಗರ ಪ್ರದೇಶಗಳಲ್ಲಿ ವಾಸಿಸುವ ಬಡವರು, ಆಶ್ರಯರಹಿತರಿಗೆ ಸೂಕ್ತವಾದ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಜಾರಿ ಮಾಡಿದೆ. ಆದರೆ ಇದೀಗ ಈ ಯೋಜನೆಯನ್ನು ಕರ್ನಾಟಕದಲ್ಲಿ ಅನುಷ್ಠಾನಕ್ಕೆ ತರಲು ಕಾಂಗ್ರೆಸ್ ಸರ್ಕಾರ ಮಾತ್ರ ಹಿಂದೇಟು ಹಾಕುತ್ತಿದೆ. ಇದನ್ನು ದ.ಕ ಸಂಸದ ಬ್ರಿಜೇಶ್ ಚೌಟ ಅವರು ಸಂಸತ್ತಿನಲ್ಲಿ ಖಡಕ್ ಆಗಿ ಪ್ರಶ್ನಿಸಿದ್ದಾರೆ.
ಸಂಸದ ಚೌಟ ಕೇಳಿದ ಪ್ರಶ್ನೆಗೆ ಕೇಂದ್ರ ವಸತಿ ಸಚಿವ ಹೇಳಿದ್ದೇನು..?
ಕಡುಬಡವರು, ಮಧ್ಯಮ ವರ್ಗದ ಬಡ ಕುಟುಂಬಗಳಿಗೆ ಯೋಗ್ಯ ವಸತಿ ಒದಗಿಸುವ ಸದುದ್ದೇಶದಿಂದ ಕಳೆದ ಸಪ್ಟೆಂಬರ್ ನಿಂದ ಪಿಎಂಎವೈಯು ಯೋಜನೆ ಅನುಷ್ಠಾನಕ್ಕೆ ತಂದಿದೆ. ಇದರ ನಿಯಮಾವಳಿ ಪ್ರಕಾರ ಇಲ್ಲಿಯವರೆಗೆ ಕೇಂದ್ರಾಡಳಿತ ಪ್ರದೇಶ ಒಳಗೊಂಡಂತೆ ೨೯ ರಾಜ್ಯಗಳು ಕೇಂದ್ರದ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಆದರೆ ಸಿದ್ಧರಾಮಯ್ಯ ಸರ್ಕಾರ ಮಾತ್ರ ಇಲ್ಲಿಯವರೆಗೂ ನಗರ ಪ್ರದೇಶದ ಬಡವರಿಗೆ ವಸತಿ ಒದಗಿಸುವ ಈ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನಕ್ಕೆ ಒಪ್ಪಂದ ಮಾಡಿಕೊಂಡಿಲ್ಲ ಎಂದು ಕೇಂದ್ರ ವಸತಿ ಸಚಿವ ತೋಖಾನ್ ಸಾಹು ತಿಳಿಸಿದ್ದಾರೆ.
ಈ ಯೋಜನೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು..?
ಮನೆ ಇಲ್ಲದೆ ಆರ್ಥಿಕವಾಗಿ ದುರ್ಬಲವಾಗಿರುವ ಮತ್ತು ವಾರ್ಷಿಕ ಆದಾಯ ಕಡಿಮೆ ಇರುವವರು ಈ ಯೋಜನೆಯ ಫಲಾನುಭವಿಗಳು ಆಗಲು ಅರ್ಹರಾಗಿರುತ್ತಾರೆ. ಅಷ್ಟೇ ಅಲ್ಲದೆ ವಿಧವೆಯರು, ಒಂಟಿ ಮಹಿಳೆಯರು, ದಿವ್ಯಾಂಗರು, ಹಿರಿಯ ನಾಗರಿಕರು ಮತ್ತು ಸಮಾಜದಲ್ಲಿ ಹಿಂದುಳಿದ ಮತ್ತು ದುರ್ಬಲ ವರ್ಗಗಳಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ. ಸರ್ವ ಪಂಗಡದ ಜನರ ಅಭ್ಯುದಯಕ್ಕಾಗಿ ಈ ಯೋಜನೆ ಜಾರಿಗೆ ತರಲಾಗಿದ್ದು ಅರ್ಹ ಜನರು ಈ ಯೋಜನೆಯನ್ನು ಪಡೆಯಲು ಅರ್ಜಿ ಸಲ್ಲಿಸಬಹುದು.