ದ.ಕ: ಕರಾವಳಿಯಲ್ಲಿ ಕಂಬಳಕ್ಕೆ ಹೆಚ್ಚಿನ ಪ್ರಾಧಾನ್ಯತೆಯಿದೆ. ಉತ್ತರ ಕರ್ನಾಟಕದ ಜನ ಸಿನಿಮಾವನ್ನು ಹುಚ್ಚರಂತೆ ಪ್ರೀತಿಸುತ್ತಾರೆ. ಅದೇ ರೀತಿ ಇಲ್ಲಿ ಕಂಬಳವನ್ನು ಜನ ಅಷ್ಟೇ ಪ್ರಮಾಣದಲ್ಲಿ ಪ್ರೀತಿಸುತ್ತಾರೆ, ಆರಾಧಿಸುತ್ತಾರೆ. ಕಂಬಳದ ಕೋಣಗಳಿಗೆ ಕೂಡಾ ಅದರದ್ದೇ ಆದ ಅಭಿಮಾನಿ ಬಳಗವಿದೆ. ಇನ್ನು ಕಂಬಳದ ಸೀಸನ್ ಆರಂಭಗೊಳ್ಳುತ್ತಿದ್ದು ಅಲ್ಲಿ ಇಲ್ಲಿ ಕಂಬಳ ಕ್ರೀಡೆಗಳು ಅತ್ಯಂತ ಅದ್ಧೂರಿಯಾಗಿ ನಡೆಯುತ್ತಿರುತ್ತದೆ.
ಈ ಬಾರಿ ಮಿಯ್ಯಾರು ಕಂಬಳ ರದ್ದು...!?
ಆದರೆ ಇದೀಗ ಕಂಬಳದ ಕಾಶಿಯೆಂದೇ ಪ್ರಸಿದ್ಧಿ ಪಡೆದಿರುವ ಕಾರ್ಕಳ ತಾಲ್ಲೂಕಿನ ಮಿಯ್ಯಾರಿನಲ್ಲಿ ಮುಂದಿನ ತಿಂಗಳು ನಡೆಯಬೇಕಿದ್ದ ಲವ-ಕುಶ ಜೋಡುಕೆರೆ ಕಂಬಳ ಕೂಟ ನಿಗದಿತ ದಿನಾಂಕದಂದು ನಡೆಯುತ್ತಿಲ್ಲ ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
2025 ರ ಜನವರಿ 04ರಂದು ಮಿಯ್ಯಾರಿನಲ್ಲಿ ಕಂಬಳ ನಡೆಸುವುದೆಂದು ಈ ಹಿಂದೆ ನಿರ್ಧರಿಸಲಾಗಿತ್ತು. ಆದರೆ ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆಯಲಿರುವ ಕಾರಣದಿಂದ ಕಂಬಳ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಕಾರ್ಕಳ ಕಂಬಳ ಸಮಿತಿ ತಿಳಿಸಿದೆ.
ಹೊಕ್ಕಾಡಿಗೋಳಿ ಕಂಬಳಕ್ಕೆ ಡೇಟ್ ಫಿಕ್ಸ್...!!
ಇಂದು ನಡೆಯಬೇಕಿದ್ದ ಹೊಕ್ಕಾಡಿಗೋಳಿ ವೀರ ವಿಕ್ರಮ ಜೋಡುಕರೆ ಕಂಬಳವು ಮಳೆಯ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಹೀಗಾಗಿ ಮಿಯ್ಯಾರು ಕಂಬಳ ರದ್ದು ಆಗಿದ್ದರಿಂದ ಜ.04ರಂದು ಹೊಕ್ಕಾಡಿಗೋಳಿ ಕಂಬಳ ನಡೆಸಲು ಜಿಲ್ಲಾ ಸಮಿತಿ ಅನುಮತಿಸಿದೆ ಎಂದು ದೇವಿಪ್ರಸಾದ್ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಿಯ್ಯಾರು ಕಂಬಳ ಸಂಪೂರ್ಣವಾಗಿ ರದ್ದಾಗದೆ ಒಂದು ಅನುಕೂಲವಾದ ನಿರ್ದಿಷ್ಟ ದಿನಾಂಕದಂದು ನಡೆಸಲು ತೀರ್ಮಾನಿಸಲಾಗುತ್ತದೆ ಎಂದು ಕೂಡಾ ಸಮಿತಿ ತಿಳಿಸಿದೆ.