ಚಳಿಗಾಲದ ಅಧಿವೇಶನದಲ್ಲಿ ಹೊತ್ತಿ ಉರಿಯಲಿದೆ ಹಗರಣಗಳ ಕಿಡಿ...!! ಇಂದಿನಿಂದ ಕಾಂಗ್ರೆಸ್- ಬಿಜೆಪಿ ಸಂಘರ್ಷ...!!

  • 09 Dec 2024 01:02:48 PM

ಬೆಳಗಾವಿ: ಕರ್ನಾಟಕ ರಾಜ್ಯದ ರಾಜಕೀಯ ವ್ಯವಸ್ಥೆ ದಿನಕ್ಕೊಂದು ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಾ ಬರುತ್ತಿದೆ. ಒಂದು ಕಡೆ ಹಗರಣಗಳ ವಿವಾದ ತಳುಕು ಹಾಕುತ್ತಿದ್ದಂತೆ ಮತ್ತೊಂದು ಕಡೆ ಬೈ ಎಲೆಕ್ಷನ್ ಎಫೆಕ್ಟ್ ಕೂಡಾ ಪರಿಣಾಮ ಬೀರುತ್ತಿದೆ. ಇಂದಿನಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಪಡೆದುಕೊಂಡು ಜೋಶ್ ನಲ್ಲಿರುವ ಕಾಂಗ್ರೆಸ್ ಸರ್ಕಾರದ ಹೆಡೆಮುರಿ ಕಟ್ಟಲು ವಿಪಕ್ಷಗಳು ರೆಡಿಯಾಗಿದೆ.

 

ಹತ್ತು ದಿನಗಳ ಕಾಲ ನಡೆಯಲಿದೆ ಚಳಿಗಾಲ ಅಧಿವೇಶನ...!!

 

10 ದಿನಗಳ ಕಾಲ ನಡೆಯಲಿರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಅನೇಕ ವಿಚಾರಗಳ ಕುರಿತು ಬಿಸಿ ಬಿಸಿ ಚರ್ಚೆಗಳು, ವಾಗ್ವಾದಗಳು ನಡೆಯಲಿದೆ. ಇದಕ್ಕೆ ಎರಡೂ ಪಕ್ಷಗಳು ಕೂಡಾ ತಯಾರಿಯನ್ನು ಮಾಡಿಕೊಂಡಿದೆ. ಮುಡಾ, ವಾಲ್ಮೀಕಿ, ಅಬಕಾರಿ, ವಕ್ಫ್, ಬಾಣಂತಿಯರ ಸಾವು ಪ್ರಕರಣಗಳು ಸರ್ಕಾರಕ್ಕೆ ಬಿಸಿತುಪ್ಪವಾಗಿ ಪರಿಣಮಿಸಲಿದೆ. ಇದನ್ನು ಯಾವ ರೀತಿ ನಿಭಾಯಿಸುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ. ಅಧಿವೇಶನದಲ್ಲಿ ಬಿಬಿಎಂಪಿ ವಿಧೇಯಕ, ರಾಜ್ಯಪಾಲರ ಅಧಿಕಾರ ಮೊಟಕು ಮಾಡುವ ಗ್ರಾಮೀಣಾಭಿವೃದ್ಧಿ ವಿವಿ ವಿಧೇಯಕ ಸೇರಿ 15ಕ್ಕೂ ಹೆಚ್ಚು ಮಸೂದೆಗಳು ಮಂಡನೆ ಆಗಲಿವೆ. ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ವಿಜಯೇಂದ್ರ, ಸದನದ ಒಳಗೆ, ಹೊರಗೆ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತೇವೆ, ಕಾಂಗ್ರೆಸ್ ಉತ್ತರಕೊಡಲಾಗದೆ ಮೌನವಾಗಲಿದೆ ಎಂದು ಹೇಳಿದ್ದಾರೆ. ವಿಪಕ್ಷಗಳ ಅಸ್ತ್ರಗಳನ್ನು ಎದುರಿಸಲು ನಾವ್ ರೆಡಿ, ಏನ್ ಬೇಕಾದ್ರೂ ಮಾಡ್ಕೊಳ್ಳಿ ಎಂದು ಸಿಎಂ ಸಿಎಂ ಸಿದ್ದರಾಮಯ್ಯ ಡೋಂಟ್ ಕೇರ್ ವರ್ತನೆಯನ್ನು ತೋರಿಸಿದ್ದಾರೆ. 

 

ಬಿಜೆಪಿ ಮತ್ತು ರಾಜ್ಯ ಸರ್ಕಾರದ ಮಧ್ಯೆ ಸಂಘರ್ಷ...!! 

 

ಈ ಬಾರಿ ರಾಜ್ಯಸರ್ಕಾರವನ್ನು ಟೀಕಿಸಲು ಬಿಜೆಪಿ ಅನೇಕ ಅಸ್ತ್ರಗಳನ್ನು ರೆಡಿ ಮಾಡಿಕೊಂಡಿದೆ. ಇವರ ಬಾಣದೇಟಿಗೆ ಸರ್ಕಾರ ಏನ್ ಮಾಡಲಿದೆ ಎಂಬ ಕುತೂಹಲ ಎಲ್ಲರದ್ದು. ಮುಡಾ ಸೈಟ್ ಹಂಚಿಕೆ ಹಗರಣ ಬಹಳ ದೊಡ್ಡ ಪೆಟ್ಟು ನೀಡಲಿದೆ. ಅದಲ್ಲದೆ ವಾಲ್ಮೀಕಿ ನಿಗಮ ಅಕ್ರಮ ಪ್ರಕರಣ ಕೂಡಾ ಬಿಸಿತುಪ್ಪವಾಗಿ ಪರಿಣಮಿಸಿದೆ. ವಕ್ಫ್ ಆಸ್ತಿ ಕಬಳಿಕೆ ವಿವಾದ ಕೂಡಾ ಅಧಿವೇಶನದಲ್ಲಿ ಪ್ರಸ್ತಾಪವಾಗಲಿದೆ. ಒಟ್ಟಾರೆಯಾಗಿ ಎರಡೂ ಪಕ್ಷಗಳು ಕೂಡಾ ಒಂದನ್ನೊಂದು ಟೀಕಾಪ್ರಹಾರ ಮಾಡಲಿದೆ.