ಬಂಟ್ವಾಳ: ಮನೆಯಲ್ಲಿರುವ ಸಣ್ಣ ಮಕ್ಕಳ ಬಗ್ಗೆ ಹೆತ್ತವರು ಅದೆಷ್ಟು ಗಮನ ವಹಿಸಿದರೂ ಕಡಿಮೆಯೇ. ಸ್ವಲ್ಪ ಎಚ್ಚರ ತಪ್ಪಿದರೂ ದುರಂತ ಸಂಭವಿಸುವ ಸಾಧ್ಯತೆ ಹೆಚ್ಚು. ಅಂತಹ ಅದೆಷ್ಟೋ ಪ್ರಕರಣಗಳು ನಡೆದು ಹೋಗಿದೆ. ಇದೀಗ ಬಂಟ್ವಾಳದಲ್ಲಿ ಅಂತಹುದೇ ದುರಂತ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಬಾಲಕಿಯ ಪಾಲಿಗೆ ಯಮನಾದ ಜೋಕಾಲಿ...!
ಜೋಕಾಲಿಯಲ್ಲಿ ಆಟವಾಡುತ್ತಿದ್ದ ಸಂದರ್ಭ ಜೋಕಾಲಿ ಹಗ್ಗ ಕುತ್ತಿಗೆಗೆ ಸುತ್ತಿ ಬಾಲಕಿಯೋರ್ವಳು ದಾರುಣವಾಗಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಬುಡೋಳಿ ಸಮೀಪದ ಮಡಲ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ. ಬುಡೋಳಿ ಮಡಲ ನಿವಾಸಿ ಕಿಶೋರ್ ಅವರ ಪುತ್ರಿ ತೀರ್ಥಶ್ರೀ (8) ಜೋಕಾಲಿಯಲ್ಲಿ ಆಡುತ್ತಿದ್ದಾಗ ಹಗ್ಗ ಕುತ್ತಿಗೆಗೆ ಬಿಗಿದು ಸಾವಿಗೀಡಾದ ಬಾಲಕಿ ಎಂದು ಗುರುತಿಸಲಾಗಿದೆ. ಈ ದುರ್ಘಟನೆ ಸ್ಥಳೀಯರನ್ನು ಅಚ್ಚರಿಗೊಳಿಸಿದೆ.
ಆಡುತ್ತಿದ್ದಾಗ ನಡೆದ ಆಕಸ್ಮಿಕ ಘಟನೆ...!
ಮೂರನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಈಕೆ ಶೇರಾ ಶಾಲೆಯಲ್ಲಿ ಕಲಿಯುತ್ತಿದ್ದಳು. ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕುತ್ತಿಗೆಗೆ ಹಗ್ಗ ಸಿಲುಕಿ ಈ ದುರ್ಘಟನೆ ಸಂಭವಿಸಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆತ್ತ ಮಗಳನ್ನು ಕಳೆದುಕೊಂಡ ದುಃಖ ಹೆತ್ತವರನ್ನು ಅತೀವವಾಗಿ ಕಾಡುತ್ತಿದೆ. ಬಾಲಕಿಯ ಸಾವಿಗೆ ಸ್ಥಳೀಯರು, ಶಾಲಾ ಆಡಳಿತ ಮಂಡಳಿ ಸಂತಾಪವನ್ನು ಸೂಚಿಸಿದೆ.