ಬೆಂಗಳೂರು, ಡಿಸೆಂಬರ್ 10: ಕರ್ನಾಟಕದ ಹಿರಿಯ ರಾಜಕಾರಾಣಿ ಮತ್ತು ಮಾಜಿ ಮುಖ್ಯಮಂತ್ರಿಯಾದ ಎಸ್ಎಂ ಕೃಷ್ಣ ಇಂದು ನಸುಕಿನ ಜಾವ 2:30ರ ಸುಮಾರಿಗೆ ವಿಧಿವಶರಾದರು. 92 ವರ್ಷ ವಯಸ್ಸಿನ ಕೃಷ್ಣರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಇಂದು ಬೆಳಗ್ಗೆ ಕೊನೆ ಉಸಿರೆಳದಿದ್ದಾರೆ. ಕರ್ನಾಟಕ ಧೀಮಂತ ನಾಯಕ ಪ್ರಖ್ಯಾತ ರಾಜಕಾರಣಿಯನ್ನ ಕಳೆದುಕೊಂಡಿದೆ.
ಮಂಡ್ಯ ಜಿಲ್ಲೆಯ ಸೋಮನಹಳ್ಳಿಯಲ್ಲಿ ಜನ್ಮತಾಳಿದ ಇವರು1962 ರಲ್ಲಿ ಮದ್ದೂರು ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ತಮ್ಮ ರಾಜಕೀಯ ಪ್ರವಾಸವನ್ನು ಆರಂಭಿಸಿದರು. ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಮೂರು ಬಾರಿ ಸಂಸದರಾಗಿ ಹಾಗೂ ನಾಲ್ಕು ಬಾರಿ ಶಾಸಕನಾಗಿ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಿದರು. 1999ರಲ್ಲಿ ಮುಖ್ಯಮಂತ್ರಿ ಹುದ್ದೆ ಹೊಂದಿದ ಅವರು ಪಾಂಚಜನ್ಯ ಯಾತ್ರೆ ಮೂಲಕ ರಾಜ್ಯದ ಕಾಂಗ್ರೆಸ್ ಪಕ್ಷವನ್ನು ಸಬಲಗೊಳಿಸಿದರು. ಮಹಾರಾಷ್ಟ್ರ ರಾಜ್ಯಪಾಲ ಹುದ್ದೆ ಸೇರಿದಂತೆ ವಿದೇಶಾಂಗ ಸಚಿವರಾಗಿ ಕೇಂದ್ರದಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದರು.
ಎಸ್ಎಂ ಕೃಷ್ಣ ಅವರು 2017ರಲ್ಲಿ ಕಾಂಗ್ರೆಸ್ ತ್ಯಜಿಸಿ ಬಿಜೆಪಿಗೆ ಸೇರಿದರು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ 2023ರಲ್ಲಿ ಅವರು ರಾಜಕೀಯಜೀವನಕ್ಕೆ ನಿವೃತ್ತಿಯನ್ನ ಘೋಷಿಸಿದರು. ತಮ್ಮ ವೃದ್ದಾಪ್ಯದ ಸಮಯದಲ್ಲೂ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದ ಮೇಲೆ ಆಳವಾದ ಪ್ರಭಾವ ಬೀರಿದ್ದರು.
ಕರ್ನಾಟಕದ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸಿದ ಕೃಷ್ಣರ ನಿಧನ ರಾಜ್ಯದ ರಾಜಕೀಯ ಮತ್ತು ಜನತೆಗೆ ತುಂಬಲಾರದ ದೊಡ್ಡ ನಷ್ಟವಾಗಿದೆ.