ಮುರುಡೇಶ್ವರ ಸಮುದ್ರದಲ್ಲಿ ಆಟವಾಡುತ್ತಿದ್ದ ವಿದ್ಯಾರ್ಥಿನಿಯರು ನೀರುಪಾಲು..!! ಮೂವರು ಸೇಫ್.

  • 11 Dec 2024 11:06:10 AM

ಮುರುಡೇಶ್ವರ: ಸಮುದ್ರದಲ್ಲಿ ಅಥವಾ ನೀರಿರುವ ಜಾಗದಲ್ಲಿ ನಾವು ಮೈಮರೆತರೆ ಜೀವಕ್ಕೆ ಕುತ್ತು ಸಂಭವಿಸುತ್ತದೆ. ಸ್ನೇಹಿತರ ಜೊತೆಗೂಡಿ ಎಂಜಾಯ್ ಮಾಡುವ ಉದ್ದೇಶದಿಂದ ನಾವು ಎಲ್ಲಿಗೆ ಹೋದರೂ ಕೂಡಾ ನಮ್ಮ ಜಾಗರೂಕತೆಯಲ್ಲಿ ನಾವಿರಬೇಕು. ಈ ರೀತಿ ಸಣ್ಣ ಪ್ರಾಯದಲ್ಲಿ ಜೀವವನ್ನು ಕಳೆದುಕೊಂಡ ಅದೆಷ್ಟೋ ಘಟನೆಗಳು ನಮ್ಮ ಕಣ್ಣ ಮುಂದಿದೆ. ಇದೀಗ ಮತ್ತೊಂದು ಅಂತಹುದೇ ದುರಂತ ಘಟನೆಯೊಂದು ನಡೆದಿದೆ. 

ಅಲೆಗಳ ಹೊಡೆತಕ್ಕೆ ಸಿಲುಕಿ ವಿದ್ಯಾರ್ಥಿನಿಯರು ನೀರುಪಾಲು..!

ಸಮುದ್ರದಲ್ಲಿ ಆಟವಾಡುತಿದ್ದ 7 ಜನ ವಿದ್ಯಾರ್ಥಿನಿಯರು ಅಲೆಗಳ ಹೊಡೆತಕ್ಕೆ ನೀರುಪಾಲಾಗಿದ್ದು, ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಟಳ ತಾಲೂಕಿನ ಮುರುಡೇಶ್ವರ ಕಡಲ ತೀರದಲ್ಲಿ ನಡೆದಿದೆ. ಮೂರು ಜನ ವಿದ್ಯಾರ್ಥಿನಿಯರನ್ನು ಲೈಫ್ ಗಾರ್ಡ್‌ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಇನ್ನೂ ಮೂರು ವಿದ್ಯಾರ್ಥಿನಿಯರು ಕಾಣೆಯಾಗಿದ್ದಾರೆ. ಮುಳಬಾಗಿಲಿನ ಕೊತ್ತೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಶಾವಂತಿ (15) ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದು ಮುಳಬಾಗಿಲಿನ ಯಶೋಧ, ವೀಕ್ಷಣಾ , ಲಿಪಿಕಾ ರಕ್ಷಣೆಗೊಳಗಾದವರಾಗಿದ್ದಾರೆ. ಇವರಲ್ಲಿ ಓರ್ವಳ ಸ್ಥಿತಿ ಗಂಭೀರವಾಗಿದ್ದು ಮೂವರಿಗೂ ಭಟ್ಕಳ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದ ಶಾಲಾ ಮಕ್ಕಳು..!

ಕೋಲಾರ ಜಿಲ್ಲೆಯ ಮುಳಬಾಗಿಲಿನಿಂದ ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 54 ವಿದ್ಯಾರ್ಥಿನಿಯರು ಸಂಜೆ ಕಡಲಿನಲ್ಲಿ ಆಟವಾಡಲು ಇಳಿದಿದ್ದರು. ಈ ವೇಳೆ ಅಲೆಗಳ ಹೊಡೆತಕ್ಕೆ ಏಳು ವಿದ್ಯಾರ್ಥಿನಿಯರು ನೀರುಪಾಲಾಗಿದ್ದರು. ಈ ಸಂದರ್ಭದಲ್ಲಿ ಲೈಫ್‌ಗಾರ್ಡಗಳು ಯಾವುದೇ ಪರಿಕರ ಸಾಧನ ಇಲ್ಲದಿದ್ದರೂ ಮೂರು ಜನ ವಿದ್ಯಾರ್ಥಿನಿಯರನ್ನು ರಕ್ಷಣೆ ಮಾಡಿದ್ದಾರೆ. ಇನ್ನೂ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.