ಮಾತು ಬಾರದ ಬಾಲಕನ ಬಾಯಲ್ಲಿ ಸ್ವಾಮಿಯೇ ಶರಣಂ ಅಯ್ಯಪ್ಪ ಉದ್ಗಾರ...! ಇದು ಅವರದ್ದೇ ಮಹಿಮೆ ಎಂದ ಮಾಲಾಧಾರಿಗಳು...!!

  • 12 Dec 2024 01:37:25 PM

ಶಬರಿಮಲೆ: ಹಿಂದೂ ಧರ್ಮದಲ್ಲಿ ಪುರುಷರು ಕಠಿಣ ವೃತವನ್ನು ಆಚರಿಸಿ ಮಾಲಾಧಾರಿಗಳಾಗಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ಶಬರಿಮಲೆಗೆ ತೆರಳುತ್ತಾರೆ. ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಸ್ವಾಮಿಯ ಮಹಿಮೆಯ ಪ್ರತ್ಯಕ್ಷ್ಯ ದರ್ಶನವಾಗುತ್ತದೆ ಎನ್ನುವ ನಂಬಿಕೆ ಹಲವು ಕಡೆ ಇದೆ. ಇದೇ ಕಾರಣಕ್ಕಾಗಿಯೇ ಅಯ್ಯಪ್ಪ ಸ್ವಾಮಿಯ ಪ್ರಮುಖ ಕ್ಷೇತ್ರ ಶಬರಿಮಲೆಗೆ ಭೇಟಿ ನೀಡುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತೆ. ಇಂಥಹುದೇ ಒಂದು ಪವಾಡ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬೆಳಕಿಗೆ ಬಂದಿದ್ದು ಜನ ಹುಬ್ಬೇರಿಸಿದ್ದಾರೆ. ಒಂದು ಶಬ್ದ ಮಾತನಾಡಲೂ ಬಾಯಿ ಬರದ ಬಾಲಕನೊಬ್ನ ಒಂದು ವರ್ಷದ ಹಿಂದೆ ಶಬರಿಮಲೆ ಮೆಟ್ಟಿಲೇರಿದ್ದ. ಈ ಬಾರಿ ಮತ್ತೆ ಶಬರಿಮಲೆ ಏರಲು ಮಾಲೆ ಹಾಕಿರುವ ಈ ಬಾಲಕ ಇದೀಗ ಮಾತನಾಡಲು ಆರಂಭಿಸಿದ್ದಾನೆ.

ಕೈ ಸನ್ನೆ ಮೂಲಕ ಮಾತಾಡುತ್ತಿದ್ದ ಬಾಲಕನ ಬಾಯಲ್ಲಿ ಮಾತು...!!

ಪುತ್ತೂರಿನ ಸಾಮೆತಡ್ಕ ನಿವಾಸಿ ಪ್ರಸನ್ನ ಇದೀಗ ಮಾತನಾಡುವ ಮೂಲಕ ಅಯ್ಯಪ್ಪ ಮಾಲಾಧಾರಿಗಳಿಗೆ ಅಚ್ಚರಿ ತಂದಿದ್ದಾರೆ. ಸಣ್ಣ ಮಕ್ಕಳು ಮೊದ ಮೊದಲಿಗೆ ಯಾವ ರೀತಿ ತೊದಲು ಮಾತನಾಡುತ್ತಾರೋ, ಅದೇ ರೀತಿಯಲ್ಲಿ ಈ ಬಾಲಕ ತೊದಲು ನುಡಿಯಲು ಆರಂಭಿಸಿದ್ದಾನೆ. ಒಂದು ಶಬ್ದವನ್ನೂ ಸರಿಯಾಗಿ ಮಾತನಾಡದ ಪುತ್ತೂರು ನಿವಾಸಿ ಪ್ರಸನ್ನ ಎನ್ನುವ ಈ ಬಾಲಕ ಕಳೆದ ವರ್ಷ ಅಯ್ಯಪ್ಪ ಮಾಲೆ ಹಾಕಿ, ನಲವತ್ತೆಂಟು ದಿನಗಳ ಕಾಲ ಕಠಿಣ ವೃತಾಚರಣೆ ನಡೆಸಿ ಶಬರಿಮಲೆ ಏರಿದ್ದ. ಸುಮಾರು 48 ಮೈಲು ದುರ್ಗಮ ಕಾಡಿನ ಹಾದಿಯಲ್ಲಿ ಸಾಗಿ ಸ್ವಾಮಿ ದರ್ಶನವನ್ನು ಪಡೆದಿದ್ದ ಈ ಬಾಲಕ ಇದೀಗ ಮಾತನಾಡಲು ಆರಂಭಿಸಿದ್ದಾನೆ. ಒಂದು ಶಬ್ದ ಮಾತನಾಡಲೂ ಚಡಪಡಿಸುತ್ತಿದ್ದ ಈತ ಈಗ ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಶರಣು ಕರೆಯುತ್ತಾನೆ. ಮತ್ತೊಮ್ಮೆ ಶಬರಿಮಲೆ ಏರಲು ಸಿದ್ಧತೆ ಮಾಡಿಕೊಂಡಿದ್ದಾನೆ. 

ಇದು ಅಯ್ಯಪ್ಪನ ಮಹಿಮೆ ಎಂದ ಹಿರಿಯ ಮಾಲಾಧಾರಿಗಳು...!

ಪುತ್ತೂರಿನ ಮಹಾಲಿಂಗೇಶ್ವರ ಐಟಿಐ ನಲ್ಲಿ ಎರಡನೇ ವರ್ಷದ ಸಿವಿಲ್ ಡಿಪ್ಲೊಮಾ ಮಾಡುತ್ತಿರುವ ಪ್ರಸನ್ನ, ವರ್ಷದ ಹಿಂದೆ ಒಂದು ಶಬ್ದವನ್ನೂ ಮಾತನಾಡಲಾರದ ಸ್ಥಿತಿಯಲ್ಲಿದ್ದ. ಈತನಿಗೆ ಕಿವಿಯೂ ಅಷ್ಟೊಂದು ಕೇಳುತ್ತಿರಲಿಲ್ಲ. ಇದೀಗ ಈತನ ಸ್ವಭಾವದಲ್ಲಾದ ಬದಲಾವಣೆ ಕಂಡು ಇತರ ಮಾಲಾಧಾರಿಗಳು, ಆತನ ಹೆತ್ತವರು ಕೂಡಾ ಶಾಕ್ ಆಗಿದ್ದಾರೆ. ಆತನ ಮೇಲೆ ಅಯ್ಯಪ್ಪ ಸ್ವಾಮಿ ದಯೆ ತೋರಿದ್ದಾನೆ ಅನ್ನೋದು ಹಿರಿಯ ಅಯ್ಯಪ್ಪ ಮಾಲಾಧಾರಿಗಳ ಅಭಿಪ್ರಾಯವಾಗಿದೆ‌. ಒಟ್ಟಾರೆಯಾಗಿ ಮಕರ ಸಂಕ್ರಾಂತಿ ಸಮೀಪಿಸುತ್ತಿರುವ ಸಂದರ್ಭ ಇಂತಹ ಅಚ್ಚರಿಕರ ಘಟನೆ ನಡೆದಿರೋದು ಮನಸ್ಸಿಗೆ ಒಂಥರಾ ಖುಷಿ ಎನಿಸುತ್ತಿದೆ ಎನ್ನುತ್ತಾರೆ ಇತರ ಮಾಲಾಧಾರಿಗಳು...