ಕೋಟಿ ಕೋಟಿ ಹಣವಿದ್ದ ವೈದ್ಯಾಧಿಕಾರಿಯ ಕರಾಳ ಮುಖ ಬಯಲು!; ಗೃಹಬಂಧನದಲ್ಲಿಟ್ಟು ಪತ್ನಿಗೆ ಚಿತ್ರಹಿಂಸೆ!

  • 12 Dec 2024 02:41:35 PM

ಚಿಕ್ಕಮಂಗಳೂರು : ಸಮಾಜ ಎಷ್ಟೇ ಮುಂದುವರೆದರೂ ಕೂಡಾ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಹಲ್ಲೆ ಪ್ರಕರಣಗಳಿಗೆ ಮಾತ್ರ ಕಡಿವಾಣ ಬಿದ್ದಿಲ್ಲ. ಅದಕ್ಕೆ ಈ ಒಂದು ಘಟನೆ ಕೂಡಾ ಅಕ್ಷರಶಃ ನಿದರ್ಶನವಾಗಿದೆ. 

ಪತ್ನಿಯನ್ನು ಗೃಹಬಂಧನದಲ್ಲಿಟ್ಟು ಚಿತ್ರಹಿಂಸೆ ನೀಡಿದ ವೈದ್ಯ ಪತಿರಾಯ...!!

ಚಿಕ್ಕಮಗಳೂರಿನಲ್ಲಿ ಒಂದು ಅವಮಾನವೀಯ ಘಟನೆಯೊಂದು ನಡೆದಿದೆ. ಪತ್ನಿಯನ್ನು ಗೃಹಬಂಧನದಲ್ಲಿಟ್ಟು ಗಂಡನೋರ್ವ ಕಿರುಕುಳ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಗೃಹಬಂಧನದಲ್ಲಿದ್ದ ಮಹಿಳೆಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಚಿಕ್ಕಮಗಳೂರು ನಗರದ ದೋಣಿಕಣ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ವೈದ್ಯನೊಬ್ಬ ತನ್ನ ಪತ್ನಿಯನ್ನು ಮನೆಯಲ್ಲೇ ಬಂಧಿಸಿಟ್ಟು ಮನಸ್ಸಿಗೆ ಬಂದಂತೆ ಚಿತ್ರಹಿಂಸೆ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಮಹಿಳೆ ಚಿಕ್ಕಮಗಳೂರು ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದು, ಇದೀಗ ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿನುತಾ ರಾಣಿ ಮೂಲತಃ ಶಿವಮೊಗ್ಗದ ವಿನೋಬಾನಗರದವರು. ಇವರಿಬ್ಬರ ನಡುವೆ ಮನಸ್ತಾಪ ಆಗಿ ಡಿವೋರ್ಸ್ ಕೂಡಾ ಆಗಿದೆ. ಆದರೆ ವಿಚ್ಛೇದನ ನೀಡಿ ಕೂಡಾ ಆಕೆಯನ್ನು ಮನೆಯಲ್ಲಿ ಕೂಡಿ ಹಾಕಿದ್ದಾನೆ ಎಂದು ವಿನುತಾ ರಾಣಿ ಅವರ ಮನೆಯವರು ಆರೋಪಿಸಿದ್ದಾರೆ. ಡಾ.ರವಿಕುಮಾರ್ ವಿನುತಾ ರಾಣಿಗೆ ಚಿತ್ರಹಿಂಸೆ ನೀಡಿರುವ ಬಗ್ಗೆಯೂ ದೂರಿನಲ್ಲಿ ತಿಳಿಸಲಾಗಿದೆ. ಆಕೆಯ ಗಂಡ ಊಟದಲ್ಲಿ ಮತ್ತಿನ ಔಷಧ ನೀಡುತ್ತಿದ್ದ, ಜತೆಗೆ ಮನೆಯಲ್ಲೇ ಬಂಧಿಸಿ ಚಿತ್ರಹಿಂಸೆ ನೀಡುತ್ತಿದ್ದ ಎಂದು ಆರೋಪಿಸಿದ್ದಾರೆ. ಇದೀಗ ಮಹಿಳೆಯ ಕುಟುಂಬದವರು ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದು, ಬಂಧಿಸುವಂತೆ ಒತ್ತಾಯಿಸಿದ್ದಾರೆ. ವಿನುತಾ ರಾಣಿ ತೀವ್ರ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಡಾಕ್ಟರ್ ಎಸ್ಕೇಪ್...!!

ಪೊಲೀಸರಿಗೆ ಈ ಸುದ್ದಿ ತಿಳಿಯುತ್ತಿದ್ದಂತೆ ಮಹಿಳೆಯ ಪತಿ ರವಿಕುಮಾರ್ ದಿಢೀರ್ ನಾಪತ್ತೆಯಾಗಿದ್ದಾನೆ. ಮಹಿಳೆಯನ್ನು ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರವಿಕುಮಾರ್ ವೃತ್ತಿಯಲ್ಲಿ ವೈದ್ಯರಾಗಿದ್ದು, ಡಾ. ರವಿಕುಮಾರ್ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. 22 ವರ್ಷಗಳ ಹಿಂದೆ ಡಾ.ರವಿಕುಮಾರ್ ಮತ್ತು ವಿನುತಾರಾಣಿ (48) ಅವರು ವಿವಾಹವಾಗಿದ್ದರು. ನಂತರ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಇಬ್ಬರು ಬೇರೆಯಾಗಿದ್ದಾರೆ. ಕಳೆದ 1 ವರ್ಷದ ಹಿಂದೆ ವಿನುತಾರಾಣಿ ಅವರಿಗೆ ಡಾ.ರವಿಕುಮಾರ್ ವಿಚ್ಛೇದನ ನೀಡಿದ್ದಾರೆ. ಆದರೂ ಕೂಡಾ ಹೀಗೆ ಗೃಹಬಂಧನದಲ್ಲಿಟ್ಟು ವಿಚ್ಚೇದಿತ ಮಹಿಳೆಯನ್ನು ಹಿಂಸಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಆಕೆಯ ಮನೆಯವರು ಮತ್ತು ಸ್ಥಳೀಯರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ನಾಪತ್ತೆಯಾದ ವ್ಯಕ್ತಿಯನ್ನು ಹುಡುಕಲು ಪೊಲೀಸರು ಶೋಧ ಕಾರ್ಯವನ್ನು ಚುರುಕುಗೊಳಿಸಿದ್ದಾರೆ.