ಉತ್ತರ ಪ್ರದೇಶ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಪ್ರತೀ 12 ವರ್ಷಗಳಿಗೊಮ್ಮೆ ಮಹಾಕುಂಭ ಮೇಳ ನಡೆಯುತ್ತದೆ. ಈ ಅದ್ಭುತವಾದ ಆಚರಣೆಗೆ ಅದೆಷ್ಟೋ ಸಹಸ್ರಾರು ಹಿಂದೂಗಳು ಸಾಕ್ಷಿಯಾಗುತ್ತಾರೆ. ಇದೀಗ ಆ ದಿನ ಮತ್ತೆ ಸಮೀಪಿಸುತ್ತಿದೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ 2025 ಜನವರಿ 13ರಿಂದ ಪ್ರಾರಂಭವಾಗಲಿರುವ ಮಹಾಕುಂಭ ಮೇಳಕ್ಕೆ ಭರದಿಂದ ಸಿದ್ಧತೆಗಳು ನಡೆಯುತ್ತಿದೆ.
#Uttar Pradesh
ಪ್ರಧಾನಿ ನರೇಂದ್ರ ಮೋದಿಯಿಂದ ಉದ್ಘಾಟನೆ...
#Kumbh Mela
ಇಂದು ಮಧ್ಯಾಹ್ನ 12.15ಕ್ಕೆ ಪ್ರಧಾನಿ ಮೋದಿಯವರು ಆಗಮಿಸಲಿದ್ದಾರೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ತ್ರೀವೇಣಿ ಸಂಗಮದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹ ಇವರ ಜೊತೆ ಸಾಥ್ ನೀಡಲಿದ್ದಾರೆ. ಅವರು, ಗುರುವಾರ ಪ್ರಯಾಗ್‌ರಾಜ್‌ಗೆ ಭೇಟಿ ನೀಡಿ, ಸಿದ್ಧತಾ ಕಾರ್ಯಗಳನ್ನು ಕೂಡಾ ಪರಿಶೀಲಿಸಿದ್ದರು. ಇನ್ನು ಇಂದು ರೈಲ್ವೆ ಇಲಾಖೆಯ 1,609 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳೂ ಸೇರಿದಂತೆ ಸುಮಾರು 5,500 ಕೋಟಿ ರೂ. ಮೊತ್ತದ ಹಲವು ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಇದರೊಂದಿಗೆ ಮಹಾಕುಂಭ ಮೇಳದ ಧಾರ್ಮಿಕ ವಿಧಿ ವಿಧಾನಗಳನ್ನೂ ನೆರವೇರಿಸಲಿದ್ದಾರೆ.
PrayagRaj Maha -kumbh mela once in 12 years
50 ದಿನಗಳವರೆಗೆ ನಡೆಯಲಿದೆ ಈ ಮಹಾ ಧಾರ್ಮಿಕ ಮಹೋತ್ಸವ...
ಅದೆಷ್ಟೋ ವರ್ಷಗಳ ನಂತರ ನಡೆಯುವ ಈ ಮಹಾ ಧಾರ್ಮಿಕ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಈಗಾಗಲೇ ಇದಕ್ಕೆ ಸಕಲ ಸಿದ್ಧತೆಗಳು ಕೂಡಾ ಭರದಿಂದ ಸಾಗುತ್ತಿದೆ. ಪ್ರಯಾಗ್‌ರಾಜ್‌ನಲ್ಲಿ 12 ವರ್ಷಗಳಿಗೊಮ್ಮೆ ಈ ಕುಂಭಮೇಳ ನಡೆಯುತ್ತದೆ. ಈ ಬಾರಿ ಅದು 2025ರ ಜನವರಿ 13ರಿಂದ ಫೆಬ್ರವರಿ 26ರ ವರೆಗೆ ಜರುಗಲಿದೆ. 50 ದಿನಗಳವರೆಗೆ ನಡೆಯುವ ಈ ಮಹಾ ಧಾರ್ಮಿಕ ಮಹೋತ್ಸವದಲ್ಲಿ ಸುಮಾರು 15 ಕೋಟಿ ಜನರು ಭಾಗವಹಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆ ರೈಲ್ವೆ ಇಲಾಖೆಯೂ ಪ್ರಯಾಣಿಕರ ಅನುಕೂಲಕ್ಕಾಗಿ ಒಟ್ಟು 13,000 ರೈಲುಗಳ ಸಂಚಾರ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಮಹಾ ಕುಂಭಮೇಳದ ಅವಧಿಯಲ್ಲಿ ರೈಲ್ವೆ ಇಲಾಖೆಯು 10,000 ದೈನಂದಿನ ರೈಲುಗಳ ಜತೆಗೆ ಹೆಚ್ಚುವರಿಯಾಗಿ 3,000 ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ ಎಂದು ಉತ್ತರ ಮಧ್ಯ ರೈಲ್ವೆಯ ಮುಖ್ಯ ಜನ ಸಂಪರ್ಕ ಅಧಿಕಾರಿ ಶಶಿಕಾಂತ ತ್ರಿಪಾಠಿ ತಿಳಿಸಿದ್ದಾರೆ. ಇನ್ನು ಅಷ್ಟೇ ಅಲ್ಲದೆ ಮುಂಜಾಗೃತಾ ಕ್ರಮವಾಗಿ ಪ್ರಯಾಗ್‌ರಾಜ್ ಮತ್ತು ಅದರ ವ್ಯಾಪ್ತಿಯಲ್ಲಿ ಬರುವ 9 ರೈಲು ನಿಲ್ದಾಣಗಳಲ್ಲೂ ಸಿ.ಸಿ.ಟಿ.ವಿ ಕ್ಯಾಮೆರಾಗಳ ಮೂಲಕ ಕಣ್ಣಾವಲು ಇಡಲಾಗಿದೆ. ಈ ನಿಲ್ದಾಣಗಳಲ್ಲಿ ಒಟ್ಟಾರೆ 1,186 ಸಿಸಿಟಿವಿ ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿವೆ. ಇದರಲ್ಲಿ ಕುಂಭಮೇಳಕ್ಕೆಂದೇ ಹೊಸದಾಗಿ ಅಳವಡಿಸಿರುವ 500 ಕ್ಯಾಮೆರಾಗಳೂ ಸೇರಿ ಕಾರ್ಯಾಚರಿಸಲಿದೆ.
Maha kumbh Mela
ಈ ಪೈಕಿ 100 ಕ್ಯಾಮೆರಾಗಳು ಮುಖಚಹರೆ ಗುರುತಿಸುವ ವ್ಯವಸ್ಥೆಯನ್ನು ಹೊಂದಿವೆ. ಒಟ್ಟಿನಲ್ಲಿ ದೀರ್ಘ ಅವಧಿಯವರೆಗೂ ನಡೆಯುವ ಈ ಕಾರ್ಯಕ್ರಮದಲ್ಲಿ ಯಾರಿಗೂ ಯಾವುದೇ ರೀತಿಯ ತೊಂದರೆಗಳಾಗಬಾರದು, ಗಲಭೆ ಸೃಷ್ಟಿಯಾಗಬಾರದು ಎಂಬುವುದೇ ಈ ಪೂರ್ವ ತಯಾರಿಯ ಮೂಲ ಉದ್ದೇಶ.