ಯಕ್ಷ ಕಲಾಪ್ರೇಮಿಗಳ ನೆನಪುಗಳಲ್ಲಿ ಶಾಶ್ವತವಾಗಿ ಉಳಿದ ಲೀಲಾವತಿ ಬೈಪಡಿತ್ತಾಯ ಇನ್ನಿಲ್ಲ...

  • 15 Dec 2024 08:29:32 AM

ಮಂಗಳೂರು: ಯಕ್ಷಗಾನ ರಂಗದ ಪ್ರಥಮ ವೃತ್ತಿಪರ ಭಾಗವತರಾಗಿ ಖ್ಯಾತಿ ಪಡೆದ ಲೀಲಾವತಿ ಬೈಪಡಿತ್ತಾಯ (77) ಶನಿವಾರ (ಡಿಸೆಂಬರ್ 14) ದೈವಾಧೀನರಾಗಿದ್ದಾರೆ.

 

ಅವರು ತಮ್ಮ ಪದ್ಯಗಾಯನದ ಶೈಲಿ, ಮತ್ತು ಅಪಾರ ಕಲಾ ಸೇವೆಯ ಮೂಲಕ ಯಕ್ಷಗಾನದ ಪ್ರೇಕ್ಷಕರ ಹೃದಯದಲ್ಲಿ ಶಾಶ್ವತ ಸ್ಥಾನವನ್ನು ಪಡೆದುಕೊಂಡಿದ್ದಾರೆ.

 

1947ರ ಮೇ 23ರಂದು ಕಾಸರಗೋಡಿನ ಮಧೂರಿನಲ್ಲಿ ಜನಿಸಿದ ಲೀಲಾವತಿ ಅವರು ಹಿರಿಯ ಹಿಮ್ಮೇಳವಾದಕ ಹರಿನಾರಾಯಣ ಬೈಪಡಿತ್ತಾಯರ ಪತ್ನಿಯಾಗಿದ್ದರು.

 

ಬಾಲ್ಯದಲ್ಲಿಯೇ ತನ್ನ ತಂದೆಯನ್ನು ಕಳೆದುಕೊಂಡ ಕಾರಣದಿಂದ, ತಾಯಿಯ ತವರೂರಾದ ಪಡುಕಕ್ಕೆಪ್ಪಾಡಿ ಗ್ರಾಮದಲ್ಲಿ ಸೋದರಮಾವ ರಾಮಕೃಷ್ಣ ಭಟ್ ಅವರ ಆಶ್ರಯದಲ್ಲಿ ಬೆಳೆದರು.

 

 

ಲೀಲಾವತಿ ಅವರು ಪತಿ ಹರಿನಾರಾಯಣರೊಂದಿಗೆ ಅರುವ ನಾರಾಯಣ ಶೆಟ್ಟಿಯ ಆಳದಂಗಡಿ ಮೇಳದಲ್ಲಿ ಭಾಗವತಿಕೆ ಆರಂಭಿಸಿ ಪ್ರಖ್ಯಾತಿ ಗಳಿಸಿದ್ದರು.

 

ಯಕ್ಷಗಾನದ ಪ್ರಥಮ ಮಹಿಳಾ ವೃತ್ತಿಪರ ಭಾಗವತರಾಗಿ ಅವರು ಇತಿಹಾಸ ಬರೆದಿದ್ದಾರೆ.

 

ಕುಂಬಳೆ, ಬಪ್ಪನಾಡು, ಸುಬ್ರಹ್ಮಣ್ಯ, ಧರ್ಮಸ್ಥಳ ಮತ್ತು ತಲಕಳದ ಮೇಳಗಳಲ್ಲಿ ತಮ್ಮ ಪದ್ಯಗಾಯನದ ಕಲೆಗಳನ್ನ ಪ್ರಸರಿಸಿದ್ದರು.

 

ಅವರ ಶ್ರದ್ಧಾವಂತ ವಿಶೇಷ ಶೈಲಿಯ ಪದ್ಯಗಾಯನಕ್ಕಾಗಿ ಪ್ರೇಕ್ಷಕರು ಯಕ್ಷಗಾನ ನೋಡುವುದಕ್ಕಾಗಿ ಬರುತ್ತಿದ್ದರು.

 

ಕನ್ನಡ ಶಾಸ್ತ್ರೀಯ ಸಂಗೀತದಲ್ಲಿ ಪಿಟೀಲು ವಾದಕ ಪದ್ಮನಾಭ ಸರಳಾಯರಿಂದ ತರಬೇತಿ ಪಡೆದಿದ್ದ ಇವರು ಪತ್ರಕರ್ತರಾದ ಅವಿನಾಶ್ ಮತ್ತು ಗುರುಪ್ರಸಾದ್ ಅವರ ತಾಯಿ.

 

ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆಯಾಗಿ ಪ್ರಥಮ ವೃತ್ತಿಪರ ಭಾಗವತೆಯಾಗಿ ಯಕ್ಷಗಾನದ ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆದಿದ್ದ ಲೀಲಾವತಿ ಅವರ ಅಗಲಿಕೆಯು ಯಕ್ಷಗಾನ ಪ್ರಪಂಚಕ್ಕೆ ತುಂಬಲಾರದ ನಷ್ಟವಾಗಿದೆ.