ಶಿವಮೊಗ್ಗ, ಕಾರ್ಗಲ್: ಶಂಭೂರಿನ ಶ್ರೀ ಸಾಯಿ ಮಂದಿರದಿಂದ ಜೋಗ್ ಫಾಲ್ಸ್ ಪ್ರವಾಸಕ್ಕೆ ತೆರಳಿದ ಖಾಸಗಿ ಬಸ್ ಕಾರ್ಗಲ್ ಬಳಿ ಪಲ್ಟಿಯಾದ ಪರಿಣಾಮದಿಂದಾಗಿ ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ.
ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಲ್ಟಿಯಾಗಿ ಈ ದುರಂತದಲ್ಲಿ ಪ್ರಯಾಣಿಕರಲ್ಲಿ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುಟಾಣಿ ಮಕ್ಕಳಿಗೆ ತೀವ್ರ ಗಾಯಗಳಾಗಿದ್ದು,
ಉಳಿದ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ಸಾಗರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಲ್ಲಿ ಶಂಭೂರು ನಿವಾಸಿಗಳಾದ ಯಶೋಧ ಮತ್ತು ದೀಕ್ಷಿತಾ ಗಂಭೀರ ಗಾಯಗೊಂಡಿದ್ದು,
ಅವರೊಂದಿಗೆ ಪ್ರಯಾಣಿಸುತ್ತಿದ್ದ ಇಬ್ಬರು ಪುಟಾಣಿ ಮಕ್ಕಳಿಗೆ ತಲೆ ಮತ್ತು ಕಣ್ಣುಗಳಿಗೆ ಗಾಯಗಳಾಗಿವೆ.
ಗಾಯಾಳುಗಳ ಸ್ಥಿತಿಯನ್ನು ಗಮನಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಎ.ಜೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಈ ಘಟನೆ ನಡೆದ ವೇಳೆ ಹಿಂದಿನಿಂದ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬಂಟ್ವಾಳ ನಿವಾಸಿಯಾದ ಇಂಜಿನಿಯರ್ ಚೈತ್ರೇಶ್ ಅವರು ತಕ್ಷಣವೇ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗಮನಕ್ಕೆ ಈ ವಿಷಯವನ್ನು ತಿಳಿಸಿದರು.
ಶಾಸಕರು ಇದಕ್ಕೆ ಕೂಡಲೇ ಸ್ಪಂದಿಸಿ ಅಗತ್ಯ ಕ್ರಮಗಳನ್ನು ಕೈಗೊಂಡರು.
ಶಾಸಕ ರಾಜೇಶ್ ನಾಯ್ಕ್ ಅವರು ತಮ್ಮ ಬೆಳಗಾವಿ ಪ್ರವಾಸವನ್ನು ರದ್ದುಗೊಳಿಸಿ ಸ್ಥಳಕ್ಕೆ ಆಗಮಿಸಿ ಗಾಯಾಳುಗಳ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಹಾಗೆಯೇ ಅಗತ್ಯವಾದ ವೈದ್ಯಕೀಯ ಚಿಕಿತ್ಸೆಗಳಿಗೆ ನೆರವನ್ನು ಕಲ್ಪಿಸಿದರು.
ಈ ಘಟನೆಯ ಬಗ್ಗೆ ಮಾಹಿತಿ ದೊರೆತ ಕೂಡಲೇ ಅವರು ರಾಜ್ಯಧ್ಯಕ್ಷ ವಿಜಯೇಂದ್ರ ಅವರನ್ನು ಸಂಪರ್ಕ ಮಾಡಿದ್ದಾರೆ ಜೊತೆಗೆ ಅಲ್ಲಿನ ಶಾಸಕ ಬೇಲೂರು ಗೋಪಾಲಕೃಷ್ಣ ಹಾಗೂ ವಿಧಾನಪರಿಷತ್ ಸದಸ್ಯ ಡಾ| ಧನಂಜಯ ಸರ್ಜಿ ಅವರಿಗೆ ಘಟನೆ ಕುರಿತು ಮಾಹಿತಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಬೇಕಾಗುವ ಆಂಬುಲೆನ್ಸ್ ವಾಹನಗಳ ವ್ಯವಸ್ಥೆಯನ್ನು ಮಾಡಿದರು
ಶಾಸಕರ ಮನವಿಯ ಮೇರೆಗೆ ಬಂಟ್ವಾಳದ ಉದ್ಯಮಿ ಉದಯಕುಮಾರ್ ಅವರ ಸಹೋದರ ಮತ್ತು ಜೋಗ್ ಕಾರ್ಗಲ್ ಪಟ್ಟಣ ಪಂಚಾಯತ್ ಸದಸ್ಯರಾದ ಹರೀಶ್ ಗೌಡ,
ಬಾಲಸುಬ್ರಹ್ಮಣ್ಯ ಮತ್ತು ಗುರುಸಿದ್ದಪ್ಪ ಅವರಿಂದ 10 ಅಂಬುಲೆನ್ಸ್ ವ್ಯವಸ್ಥೆ ಮಾಡಲಾಯಿತು ತಕ್ಷಣವೇ ಸಾಗರ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಲು ಈ ತಂಡವು ಸಹಾಯ ಮಾಡಿತು.
ಶಂಭೂರಿನ ಶ್ರೀ ಸಾಯಿ ಮಂದಿರದಿಂದ ಪ್ರವಾಸಿಗರು ನಿನ್ನೆ ಬೆಳಿಗ್ಗೆ 5 ಗಂಟೆಗೆ ಖಾಸಗಿ ಬಸ್ ಮೂಲಕ ಜೋಗ್ ಫಾಲ್ಸ್‌ಗೆ ಪ್ರಯಾಣ ಆರಂಭಿಸಿದ್ದರು.
ಬಸ್, ಶಂಭೂರು, ಪಾಣೆಮಂಗಳೂರು, ಬಿಸಿರೋಡು, ಮತ್ತು ಮಂಗಳೂರು ಭಾಗಗಳಿಂದ 45 ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಿತ್ತು. ಆದರೆ, ಕಾರ್ಗಲ್ ಬಳಿ ಬಸ್ ಗೆ ತಾಂತ್ರಿಕ ದೋಷ ಸಂಭವಿಸಿ ಈ ಭೀಕರ ಘಟನೆ ಸಂಭವಿಸಿದೆ.
ಸ್ಥಳೀಯರು ಮತ್ತು ಶಾಸಕರ ಸಮಯೋಚಿತ ಸ್ಪಂದನೆಗಳಿಂದ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ಒದಗಿಸಿ, ಹೆಚ್ಚಿನ ಪ್ರಾಣಾಪಾಯವನ್ನು ತಪ್ಪಿಸಲು ಸಾಧ್ಯವಾಯಿತು.