ಪತ್ತನಂತಿಟ್ಟ: ಕೆಲವು ಪ್ರೀತಿ ಸಂಬಂಧಗಳೇ ಹಾಗೆ. ಸ್ವಚ್ಛ ಮನಸ್ಸಿನಿಂದ, ನಿರ್ಮಲತೆಯಿಂದ ಮಾಡಿದ ಪ್ರೀತಿಗೆ ಆಯಸ್ಸು ಕಡಿಮೆ ಅಂತಾರೆ. ಪ್ರೀತಿ-ಪ್ರೇಮದ ವಿಚಾರದಲ್ಲಿ ಇಬ್ಬರೂ ಇಷ್ಟಪಟ್ಟರೆ ದೇವರಿಗೆ ಇಷ್ಟವಾಗಲ್ಲ ಅನ್ನೋ ಮಾತನ್ನು ನಾವು ಕೇಳುತ್ತಲೇ ಇರುತ್ತೇವೆ. ಇದು ಸುಳ್ಳಲ್ಲ ಬಿಡಿ..ಅದೇ ರೀತಿ ಎಂಟು ವರ್ಷ ಪ್ರೀತಿಸಿ ಮದ್ವೆಯಾಗಿದ್ದ ಜೋಡಿಯೊಂದು ದುರಂತ ಅಂತ್ಯ ಕಂಡ ಹೃದಯವುದ್ರಾವಕ ಘಟನೆ ನೋಡಿದ್ರೆ ಕಣ್ಣಂಚು ತೇವಗೊಳ್ಳೋದು ಸುಳ್ಳಲ್ಲ...!
ಮದ್ವೆ ಬಂಧದಲ್ಲಿ ಮಿಂದೆದ್ದ ಎಂಟು ವರ್ಷದ ಪ್ರೀತಿ...!!
ಪತ್ತನಂತಿಟ್ಟದ ಮಲ್ಲಶ್ಶೇರಿಯ ನಿಖಿಲ್ (29 ವರ್ಷ) ಹಾಗೂ ಅನು (26 ವರ್ಷ) ತಮ್ಮ ಕಾಲೇಜು ದಿನಗಳಿಂದಲೇ ಪರಸ್ಪರ ಪ್ರೀತಿಸುತ್ತಿದ್ದರು. ಕಾಲೇಜು ದಿನಗಳಲ್ಲಿ ಶುರುವಾದ ಪ್ರೀತಿ ಬಳಿಕ ವೃತ್ತಿ ಜೀವನದಲ್ಲೂ ಮುಂದುವರಿಯಿತು. ಇವರು ಪ್ರೀತಿ ವಿಚಾರ ಮನೆಯವರಿಗೆ ಹೇಳಿ ಕೆಲ ವರ್ಷಗಳಾಗಿತ್ತು. ಮದುವೆಗೆ ಎರಡೂ ಮನೆಯವರ ಒಪ್ಪಿಗೆ ಕೂಡಾ ಇತ್ತು.
ಬೇಗ ಮದುವೆಯಾಗಲು ಎರಡೂ ಕುಟುಂಬಸ್ಥರು ಒತ್ತಾಯ ಮಾಡುತ್ತಲೇ ಇದ್ದರು. ಆದರೆ ಸಮಯ, ಕಂಕಣ ಭಾಗ್ಯ ಕೂಡಿ ಬಂದಿರಲಿಲ್ಲ.. ಈ ಘಳಿಗೆ ನವೆಂಬರ್ 30ಕ್ಕೆ ಕೂಡಿ ಬಂದಿತ್ತು. 8 ವರ್ಷಗಳ ಸುದೀರ್ಘ ಪ್ರೀತಿ ಮದುವೆಯ ಮೂಲಕ ಹೊಸ ತಿರುವನ್ನು ಪಡೆದುಕೊಂಡಿತ್ತು.ಅಫೀಷಿಯಲಿ ಗಂಡ- ಹೆಂಡತಿ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಹನಿಮೂನ್ ಮುಗಿಸಿ ಬರುವಾಗ ನಡೆಯಿತು ದುರಂತ ಘಟನೆ..!!
ಮದುವೆಯಾದ ಈ ಜೋಡಿ ಹನಿಮೂನ್‌ಗಾಗಿ ಮಲೇಷಿಯಾಗೆ ತೆರಳಿದ್ದರು. ಹನಿಮೂನ್ ಪ್ರವಾಸ ಮುಗಿಸಿ ಭಾರತಕ್ಕೆ ಬಂದಾಗ ದುರಂತ ಸಂಭವಿಸಿದೆ. ಕಾರು ಅಪಘಾತದಲ್ಲಿ ಈ ನವ ಜೋಡಿಗಳು ಮೃತಪಟ್ಟಿದ್ದಾರೆ. ಇವರನ್ನು ವಿಮಾನ ನಿಲ್ದಾಣದಿಂದ ಕರೆತರಲು ಹೋದ ಇವರಿಬ್ಬರ ತಂದೆಯಂದಿರು ಕೂಡಾ ಇದೇ ದುರಂತದಲ್ಲಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಕೇರಳದ ಪಟ್ಟಣಂತಿಟ್ಟದಲ್ಲಿ ನಡೆದಿದೆ.
ನಿಖಿಲ್ ಹಾಗೂ ಅನು ದಂಪತಿ ಭಾನುವಾರ ಬೆಳಗಿನ ಜಾವ ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಇವರನ್ನು ವಿಮಾನ ನಿಲ್ದಾಣದಿಂದ ಕರೆ ತರಲು ಇಬ್ಬರು ಪೋಷಕರು ಕಾರಿನಲ್ಲಿ ತೆರಳಿದ್ದಾರೆ. ನಿಖಿಲ್ ತಂದೆ ಮಥಾಯ್ ಈಪನ್ ಹಾಗೂ ಅನು ತಂದೆ ಬಿಜು ಜಾರ್ಜ್ ಕಾರಿನಲ್ಲಿ ಏರ್‌ಪೋರ್ಟ್‌ಗೆ ತೆರಳಿದ್ದಾರೆ. ನವ ಜೋಡಿಗಳನ್ನು ಕರೆದುಕೊಂಡು ಹಿಂದಿರುವಾಗ ಕಾರು ಅಪಘಾತಕ್ಕೀಡಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿದ ಕಾರು, ಟೂರಿಸ್ಟ್ ಬಸ್‌ಗೆ ಡಿಕ್ಕಿಯಾಗಿದೆ.
ಭೀಕರ ಅಪಘಾತದಲ್ಲಿ ನವ ಜೋಡಿ ಹಾಗೂ ಅವರ ಪೋಷಕರು ಮೃತಪಟ್ಟಿದ್ದಾರೆ. ಮನೆ ತಲುಪಲು ಇನ್ನೇನು ಕೇವಲ 7 ಕಿಲೋಮೀಟರ್ ದೂರ ಮಾತ್ರ ಉಳಿದಿತ್ತು. ಆ ಸಂದರ್ಭವೇ ಅಪಘಾತವೊಂದು ನಾಲ್ವರ ಬದುಕಿನಲ್ಲಿ ಚೆಲ್ಲಾಟವಾಡಿದೆ. ಮನೆಯಲ್ಲಿ ಸೂತಕದ ಛಾಯೆ ಮನೆಮಾಡಿದೆ. ಸಂಭ್ರಮದಿಂದಿದ್ದ ವಾತಾವರಣ, ಮನೆಯವರು ದುಃಖದಲ್ಲಿ ಮಡುಗಟ್ಟಿದ್ದಾರೆ. ಒಟ್ಟಿನಲ್ಲಿ ಈ ದುರ್ಘಟನೆ ಕುರಿತು ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.