ಮನಿಲಾ: ಸೌಂದರ್ಯ ಅನ್ನೋದು ದೇವರು ನೀಡುವಂತಹ ಒಂದು ಅದ್ಭುತ ವರ. ಇದು ಎಲ್ಲರಿಗೂ ಸಿಗೋದಿಲ್ಲ. ಕೆಲವರು ಇದನ್ನೇ ಬಂಡವಾಳ ಮಾಡಿಕೊಂಡು ಬ್ಯೂಟಿ ಕಾಂಟೆಸ್ಟ್ ನಲ್ಲಿ ಭಾಗವಹಿಸುತ್ತಾರೆ. ಮಿಸ್ ಇಂಡಿಯಾ, ಮಿಸೆಸ್ ಇಂಡಿಯಾದಂತಹ ಅದೆಷ್ಟೋ ಸ್ಪರ್ಧೆಯಲ್ಲಿ ಕಿರೀಟ ಗೆಲ್ಲಬೇಕೆಂಬ ಅಚಲ ಹಠದಲ್ಲಿರುತ್ತಾರೆ. ಇದಕ್ಕೆ ನಮ್ಮ ಕರಾವಳಿಯ ಸುಂದರಿಯರು ಹೊರತಾಗಿಲ್ಲ ಬಿಡಿ. ಇದೀಗ ನಮ್ಮ ತುಳುನಾಡೇ ಹೆಮ್ಮೆ ಪಡುವಂತಹ ಒಂದು ಸಂಗತಿ ಬೆಳಕಿಗೆ ಬಂದಿದೆ.
ಉಡುಪಿಯ ವೈದ್ಯೆಗೆ ಸಿಕ್ಕಿತು ಮಿಸೆಸ್ ಅರ್ಥ್ ಇಂಟರ್ನ್ಯಾಷನಲ್ ಟೂರಿಸಂ ಕಿರೀಟ....!!!
ಹೌದು! ಉಡುಪಿಯ ಖ್ಯಾತ ಮಧುಮೇಹ ತಜ್ಞೆ ಡಾ. ಶೃತಿ ಬಲ್ಲಾಳ್ ಫಿಲಿಪೈನ್ಸ್ ನ ಮನಿಲಾದಲ್ಲಿ ನಡೆದ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ನಲ್ವತ್ತು ದೇಶಗಳ ಪ್ರತಿ ಸ್ಪರ್ಧಿಗಳನ್ನು ಹಿಂದಿಕ್ಕಿ ಪ್ರತಿಷ್ಠಿತ ಮಿಸೆಸ್ ಅರ್ಥ್ ಇಂಟರ್ನ್ಯಾಷನಲ್ ಟೂರಿಸಂ-2024 ಈ ಕಿರೀಟವನ್ನು ಗೆದ್ದುಕೊಂಡಿದ್ದಾರೆ. ಕೊನೆಗೂ ಡಾ.ಶೃತಿ ಅವರು ತಮ್ಮ ದೊಡ್ಡದೊಂದು ಕನಸನ್ನು ಸಾಕಾರಗೊಳಿಸಿಕೊಂಡಿದ್ದಾರೆ. ಈ ಬಗ್ಗೆ ಅವರ ಮನೆಯವರು ಕೂಡಾ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿ ತಮ್ಮ ಸಂಭ್ರಮವನ್ನು ವ್ಯಕ್ತಪಡಿಸಿದ ಉಡುಪಿಯ ವೈದ್ಯೆ...!!
ಈ ಕುರಿತು ಉಡುಪಿಯಲ್ಲಿ ಇವರು ಪತ್ರಿಕಾಗೋಷ್ಠಿ ನಡೆಸಿ ಈ ಒಂದು ಸಾಧನೆಗೆ ಪಟ್ಟ ಶ್ರಮದ ಬಗ್ಗೆ ವಿವರಿಸಿ ಹೇಳಿದರು. ಮಂಗಳೂರು ವಲಯ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿಯನ್ನು ಗೆದ್ದು ನಂತರ ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕೂಡಾ ಮಿಸೆಸ್ ಇಂಡಿಯಾ ಅರ್ಥ್ ಇಂಟರ್ನ್ಯಾಷನಲ್ ಪ್ರಶಸ್ತಿಯನ್ನು ಗೆದ್ದು ಅಂತರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದೆ.
ನಂತರ ಮನಿಲಾದಲ್ಲಿ ನಡೆದ ಸ್ಪರ್ಧೆ ಅಷ್ಟೊಂದು ಸುಲಭವಿರಲಿಲ್ಲ. ಸವಾಲುಗಳೂ ಸಾಕಷ್ಟಿತ್ತು. ಕೇವಲ ಸೌಂದರ್ಯ ಮಾತ್ರವಲ್ಲದೆ ಜ್ಞಾನ, ಪರಿಸರದ ಬಗ್ಗೆ ತೋರಿದ ಬದ್ಧತೆಯ ವಿಚಾರ ಕೂಡಾ ಅಗತ್ಯವಾಗಿತ್ತು. ಒಟ್ಟಿನಲ್ಲಿ ನನ್ನ ಪಾತ್ರ ಜ್ಯೂರಿಗಳ ಗಮನಸೆಳೆಯಿತು. ಹಾಗಾಗಿ ಈ ಪ್ರಶಸ್ತಿ ಗೆದ್ದೆ. ಈ ಗೆಲುವಿನ ನಂತರ ಐದು ದೇಶಗಳ ಪರಿಸರ ಜಾಗೃತಿಗಾಗಿ ಕೈ ಜೋಡಿಸಬೇಕು ಎಂಬ ಕರ್ತವ್ಯಕ್ಕೆ ನನ್ನನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ನನಗೆ ಆತ್ಮತೃಪ್ತಿಯಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.