ಭಾರತ ಬ್ರಿಟಿಷರಿಂದ ಸ್ವಾತಂತ್ರ ಪಡೆದ ಬಳಿಕ ಪ್ರಪ್ರಥಮ ಭಾರಿಗೆ ತ್ರಿವರ್ಣ ಧ್ವಜ ಹಾರಿಸಿದ ಐತಿಹಾಸಿಕ ಸ್ಮಾರಕ ದೆಹಲಿಯ ಕೆಂಪುಕೋಟೆಯನ್ನು ನಮಗೆ ಬಿಟ್ಟು ಕೊಡಬೇಕು, ಅದು ನಮಗೆ ಸೇರಿದ್ದು ಎಂದು ಮೊಘಲ್ ವಂಶಸ್ಥೆಯೊಬ್ಬರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಈ ವಿಚಾರ ದೇಶದಾದ್ಯಂತ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಹಾಗಿದ್ರೆ ಈ ಮೊಘಲ್ ವಂಶಸ್ಥೆ ಯಾರು?, ಈಕೆಯ ಅರ್ಜಿಗೆ ಹೈಕೋರ್ಟ್ ಏನೆಂದು ಉತ್ತರಿಸಿದೆ? ಕಂಪ್ಲೀಟ್ ಡೀಟಿಯಲ್ಸ್ ಇಲ್ಲಿದೆ ನೋಡಿ.
ಅರ್ಜಿ ಸಲ್ಲಿಸಿದ್ದು ಯಾರು? ಅರ್ಜಿಯಲ್ಲಿ ಏನಿದೆ?
ಮೊಘಲ್ ಸಾಮ್ರಾಜ್ಯದ ಕೊನೆಯ ದೊರೆ ಬಹದ್ದೂರ್ ಷಾ ಜಾಫರ್ ಮರಿಮೊಮ್ಮಗನ ಪತ್ನಿಯಾಗಿರುವ ಸುಲ್ತಾನ್ ಬೇಗಂ ದೆಹಲಿಯ ಐತಿಹಾಸಿಕ ಕೆಂಪುಕೋಟೆಯನ್ನು ನಮಗೆ ಬಿಟ್ಟು ಕೊಡಬೇಕು ಎಂದು ಹೈಕೋರ್ಟ್ ಮೊರೆ ಹೋಗಿದ್ದಾರೆ.
ಅರ್ಜಿಯಲ್ಲಿ, 'ದೆಹಲಿಯ ಕೆಂಪುಕೋಟೆಯನ್ನು ಈಸ್ಟ್ ಇಂಡಿಯಾ ಕಂಪನಿ ವಂಚನೆಯಿಂದ ಕಸಿದುಕೊಂಡಿತು. ಬಳಿಕ ಮೊಘಲ್ ಸಾಮ್ರಾಟ ಬಹದ್ದೂರ್ ಷಾ ಜಾಫರ್ ಅವರನ್ನು ಗಡಿಪಾರು ಮಾಡಿತು. ಇದರಿಂದಾಗಿ ನಮ್ಮ ಆಸ್ತಿ ಕೈತಪ್ಪಿ ಹೋಗಿದೆ. ಇದೀಗ ಭಾರತ ಸರ್ಕಾರ ನಮ್ಮ ಪೂರ್ವಜರ ಕೋಟೆಯನ್ನು ಮತ್ತೆ ನಮ್ಮ ಸ್ವಾಧೀನಕ್ಕೆ ಬಿಟ್ಟು ಕೊಡಬೇಕು' ಎಂದು ಸುಲ್ತಾನ್ ಬೇಗಂ ಕೋರಿಕೆ ಸಲ್ಲಿಸಿದ್ದಾರೆ.
ಹೈಕೋರ್ಟ್ ಹೇಳಿದ್ದೇನು?
ಸುಲ್ತಾನ್ ಬೇಗಂ ಅವರ ಅರ್ಜಿಯನ್ನು ಪರಿಶೀಲಿಸಿದ ಹೈಕೋರ್ಟ್, 'ಈಸ್ಟ್ ಇಂಡಿಯಾ ಕಂಪೆನಿ ಮೊಘಲರ ಕೆಂಪುಕೋಟೆಯನ್ನು ವಂಚನೆಯಿಂದ ವಶಪಡಿಸಿಕೊಂಡಿತು ಎಂಬುದನ್ನು ಒಪ್ಪಬಹುದು. ಆದರೆ 160 ವರ್ಷಗಳ ಬಳಿಕ ಯಾಕೆ ಈ ಅರ್ಜಿ ಸಲ್ಲಿಸುತ್ತಿದ್ದೀರಿ.
ಈ ಕೆಲಸವನ್ನು ನಿಮ್ಮ ಪೂರ್ವಜರು ಯಾಕೆ ಮಾಡಿಲ್ಲ. ಜೊತೆಗೆ ಅರ್ಜಿ ಸಲ್ಲಿಸಿದ 900 ದಿನಗಳ ಬಳಿಕ ನೀವು ಮತ್ತೆ ಅರ್ಜಿ ಪರಿಶೀಲನೆಗೆ ಕೋರಿಕೆ ಸಲ್ಲಿಸಿದ್ದೀರಿ. ಆ ಕಾರಣ ನಿಮ್ಮ ಅರ್ಜಿ ತಿರಸ್ಕೃತಗೊಂಡಿದೆ' ಎಂದಿದೆ.