ಉ.ಕ, ಹೊನ್ನಳ್ಳಿ: ಭಾರತದಲ್ಲಿ ಪರಿಸರದ ಕಾಳಜಿಯನ್ನಿಟ್ಟುಕೊಂಡು ಎಲೆಮರೆಯ ಕಾಯಿಯಂತೆ ಸಾಧನೆಗೈದವರು ಹಲವಾರು ಮಂದಿಯಿದ್ದಾರೆ. ಗಿಡಮರಗಳನ್ನು ತಮ್ಮ ಸ್ವಂತ ಮಕ್ಕಳಂತೆ ಸಲಹುವವರು ಬಲು ಕಡಿಮೆ. ಆದರೆ ಆ ಸಾಲಿಗೆ ಸಾಲು ಮರದ ತಿಮ್ಮಕ್ಕ, ತುಳಸಿ ಗೌಡ ಇವರೆಲ್ಲ ಸೇರುತ್ತಾರೆ.
ತಮ್ಮ ವೃದ್ಧಾಪ್ಯದಲ್ಲೂ ಇವರಿಬ್ಬರು ಪರಿಸರಕ್ಕೆ ಸಲ್ಲಿಸಿದ್ದ ಸೇವೆ ಮಾತ್ರ ಅದ್ವಿತೀಯ. ಆದರೆ ಇದೀಗ ಬೇಸರದ ಸುದ್ದಿಯೊಂದು ಕೇಳಿ ಬಂದಿದೆ. ಪರಿಸರ ಪ್ರೇಮಿ ಎಂದೇ ಖ್ಯಾತರಾಗಿರುವ ಕರ್ನಾಟಕ ಮೂಲದ ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಅವರು ನಿಧನರಾಗಿದ್ದಾರೆ.
ಹಸಿರು ಕ್ರಾಂತಿ ಮಾಡಿದ್ದ ಪರಿಸರಪ್ರೇಮಿ ತುಳಸಿಗೌಡ..!!
ಇವರು ಕಳೆದ 14 ವರ್ಷಕ್ಕೂ ಹೆಚ್ಚು ಕಾಲ ಗಿಡ ನೆಟ್ಟು ಬೆಳೆಸುವ ಕಾಯಕದಲ್ಲಿ ತೊಡಗಿದ್ದರು. ಗಿಡ ಮರಗಳನ್ನು ಮಾತ್ರ ಅತ್ಯಂತ ಪ್ರೀತಿಯಿಂದ ಪೋಷಿಸುತ್ತಿದ್ದರು. ಮನೆಯಲ್ಲಿ ತೀರಾ ಬಡತನವಿದ್ದೂ ಕುಟುಂಬಕ್ಕಾಗಿ ಕೂಲಿ ಕೆಲಸವನ್ನು ಮಾಡುತ್ತಲೇ ಇವರು ಪರಿಸರದ ಮೇಲೆ ಮಾತ್ರ ಅತೀವ ಪ್ರೇಮವನ್ನಿಟ್ಟುಕೊಂಡಿದ್ದರು.
ಯಾವುದೇ ಗಿಡ ಮರಗಳು ಹಾಳಾಗದಂತೆ, ನಾಶವಾಗದಂತೆ, ಬೇರೆಯವರು ಕಡಿದು ಹಾನಿ ಮಾಡದಂತೆ ಕೂಡಾ ಎಚ್ಚರಿಕೆ ವಹಿಸುತ್ತಾ ಹಸಿರು ಕ್ರಾಂತಿ ಮಾಡಿದ್ದರು. ತಮ್ಮ ಜೀವಿತಾವಧಿಯಲ್ಲಿ ಇವರು ವರ್ಷಕ್ಕೆ ಮೂವತ್ತು ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸಿದ್ದರು. ಇವರ ನಡತನ ತನ್ನ ಪರಿಸರ ಕಾಳಜಿಯ ಮೇಲೆ ಮಾತ್ರ ಯಾವುದೇ ದುಷ್ಪರಿಣಾಮ ಬೀರಲಿಲ್ಲ.
ಪರಿಸರ ಪ್ರೇಮಿ ತುಳಸಿಗೌಡ ಅವರ ಹಸಿರು ಪ್ರೇಮವನ್ನು ಮೆಚ್ಚಿ ಭಾರತ ಸರ್ಕಾರದಿಂದ ಕೊಡಮಾಡುವ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಹಿಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಂದ ತುಳಸಿ ಗೌಡ ಅವರು ಪದ್ಮಶ್ರೀ ಪ್ರಶಸ್ತಿ ಸ್ವಿಕರಿಸಿದ್ದರು. ಆ ಸಂದರ್ಭವೇ ಅವರ ಸಾಧನೆ ಮುನ್ನೆಲೆಗೆ ಬಂದಿದ್ದು ಕೂಡಾ.
ಪರಿಸರ ಸಾಧಕಿ ತುಳಸಿಗೌಡ ಅವರ ಹಿನ್ನೆಲೆ..!
1944ರಲ್ಲಿ ಹೊನ್ನಳ್ಳಿ ಗ್ರಾಮದಲ್ಲಿ ಜನಿಸಿದ್ದ ತುಳಸಿಗೌಡ ಅವರು ನಾರಾಯಣ ಹಾಗೂ ನೀಲಿ ದಂಪತಿಯ ಪುತ್ರಿ. ಇವರಿಗೆ ತುಳಸಿ ಎನ್ನುವ ಸಸ್ಯದ ಹೆಸರನ್ನೇ ಇಡಲಾಗಿತ್ತು. ಬುಡಕಟ್ಟು ಸಮುದಾಯದ ಅವರು ಬಹುತೇಕ ಜೀವನ ಕಾಡಿನಲ್ಲೇ ಕಳೆದರು.
ಆ ಸಂದರ್ಭ ಅವರಿಗೆ ಗಿಡ ಮರಗಳ ಜೊತೆಗಿನ ಬಾಂಧವ್ಯ ಹೆಚ್ಚಾಗಿತ್ತು. ಈ ಕಾರಣದಿಂದ ಅವರನ್ನು 'ಅರಣ್ಯದ ಎನ್‌ಸೈಕ್ಲೋಪೀಡಿಯಾ' ಎಂದು ಕರೆಯಲಾಗುತ್ತಿತ್ತು. ತುಳಸಿ ಗೌಡ ಅವರಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯವು 2023ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ತುಳಸಿಗೌಡ ಅವರು ಕಳೆದ ಕೆಲ ಸಮಯಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು.
ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಕರ್ನಾಟಕದ ಸಿಎಂ ಸಿದ್ಧರಾಮಯ್ಯ ಕೂಡಾ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.