ಉಡುಪಿ|ಅಂಬರ್ ಗ್ರೀಸ್ ಮಾರಾಟಕ್ಕೆ ಯತ್ನ ಕೇಸ್..! ಮಫ್ತಿಯಲ್ಲಿದ್ದ ಅಧಿಕಾರಿಗಳನ್ನೇ ಆರೋಪಿಗಳೆಂದು ಹಿಡಿದುಕೊಟ್ಟ ಸ್ಥಳೀಯರು...!!

  • 22 Dec 2024 01:51:35 PM

ಕುಂದಾಪುರ: ತಿಮಿಂಗಿಲದ ವಾಂತಿಗೆ ಸಾಕಷ್ಟು ಡಿಮ್ಯಾಂಡ್ ಇರೋದು ಎಲ್ಲರಿಗೂ ಗೊತ್ತೇ ಇದೆ. ಲಕ್ಷಾಂತರ ಹಣ ಪಡೆಯುವ ಸುಲಭದ ಮಾರ್ಗಕ್ಕೆ ಜನ ಮುಗಿಬೀಳೋದು ಸಹಜ.

 

ಸ್ಯಾಂಡ್ ಮಾಫಿಯಾ ರೀತಿಯಲ್ಲೇ ಇದರದ್ದು ಮಾಫಿಯಾ ನಡೆಯುತ್ತಲೇ ಇರುತ್ತದೆ. ಇದೀಗ ಅಂಬರ್ ಗ್ರೀಸ್ ಮಾರಾಟಕ್ಕೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಆಶ್ಚರ್ಯಕರ ಸಂಗತಿಯೊಂದು ನಡೆದಿದೆ.

 

ಏನಿದು ಘಟನೆ..?

 

ಕುಂದಾಪುರ ಕೋಡಿ ಸಮುದ್ರ ತೀರದಲ್ಲಿ ತಿಮಿಂಗಿಲ ವಾಂತಿಯ ಅಕ್ರಮ ಮಾರಾಟ ನಡೆಯುತ್ತಿರುವುದರ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಶೋಧ ಕಾರ್ಯಾಚರಣೆಗೆ ಮಫ್ತಿಯಲ್ಲಿ ಬಂದ ಸಿಐಡಿ ಅಧಿಕಾರಿಗಳ ಬಗ್ಗೆ ಸ್ಥಳೀಯರು ತಪ್ಪು ಗ್ರಹಿಕೆಯಿಂದ ಅಧಿಕಾರಿಗಳನ್ನೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

 

ಉಡುಪಿ ಜಿಲ್ಲೆಯ ಕುಂದಾಪುರ ಕೋಡಿಯಲ್ಲಿ ಅಂಬರ್ ಗ್ರೀಸ್ ಡೀಲ್ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಯುನಿಫಾರ್ಮ್ ಇಲ್ಲದೆ,

 

ಮೂರು ಕಾರಿನಲ್ಲಿ ಅರಣ್ಯ ಇಲಾಖೆಯ ಸಿಐಡಿ ವಿಭಾಗದ ಅಧಿಕಾರಿಗಳು ಬಂದಿದ್ದರು.

 

ಈ ಸಂದರ್ಭ ಶೋಧ ಕಾರ್ಯಾಚರಣೆಯಲ್ಲಿ ನಾಲ್ವರನ್ನು ವಶಕ್ಕೆ ಪಡೆದುಕೊಳ್ಳಲು ಮುಂದಾಗಿದ್ದಾರೆ. ಸ್ಥಳೀಯರ ತಪ್ಪು ಗ್ರಹಿಕೆಯಿಂದ ಅಧಿಕಾರಿಗಳನ್ನೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

 

ಘಟನೆ ವೇಳೆ ತಳ್ಳಾಟ ನಡೆದು ಗಾಯಗೊಂಡ ಅಧಿಕಾರಿಗಳು..!!

 

ಘಟನೆ ನಡೆದ ವೇಳೆ ಸುತ್ತಮುತ್ತಲಿನ ಜನ ಸೇರಿದ್ದರಿಂದ ಅಲ್ಲಿ ತಳ್ಳಾಟ ನಡೆದಿದೆ. ಇದರಿಂದಾಗಿ ಅಧಿಕಾರಿಗಳಿಗೆ ಗಾಯಗಳಾಗಿ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

 

ಆರು ತಿಂಗಳ ಹಿಂದೆ ಕೋಟ ಮಣೂರಿನಲ್ಲಿ ಸಿಐಡಿ ಅಧಿಕಾರಿಗಳ ಸೋಗಿನಲ್ಲಿ ದರೋಡೆಕೋರರು ಬಂದು ಮನೆ ದರೋಡೆಗೆ ವಿಫಲ ಪ್ರಯತ್ನ ಮಾಡಿದ್ದರು.

 

ಸಿಸಿಟಿವಿ ಕ್ಯಾಮೆರಾದಲ್ಲಿ ದರೋಡೆ ಯತ್ನದ ದೃಶ್ಯ ಸೆರೆಯಾಗಿತ್ತು. ಈ ಘಟನೆ ನೆನಪಿಸಿಕೊಂಡ ಜನರು ಇದು ಕೂಡ ಅಂತಹದ್ದೇ ಮತ್ತೊಂದು ದರೋಡೆ ಯತ್ನ ಎಂದು ತಪ್ಪು ಗ್ರಹಿಸಿ ಅಧಿಕಾರಿಗಳ ಜೊತೆಗೆ ಘರ್ಷಣೆಗೆ ಇಳಿದಿದ್ದರು.

 

ಕೊನೆಗೆ ಅವರು ನಿಜವಾದ ಸಿಐಡಿ ಅಧಿಕಾರಿಗಳು ಎಂದು ಗೊತ್ತಾದ ಮೇಲೆ ಪ್ರಕರಣ ಅಲ್ಲೇ ತಿಳಿಯಾಗಿದೆ.

 

ಆದರೆ ನಡೆಯುತ್ತಿರುವ ಅಂಬರ್ ಗ್ರೀಸ್ ವ್ಯವಹಾರದ ಆರೋಪಿಗಳನ್ನು ಸದ್ಯದಲ್ಲೇ ಬಂಧಿಸಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

 

ತಕ್ಷಣ ಕುಂದಾಪುರದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.