ಪಾಣೆಮಂಗಳೂರು: ಘನ ವಾಹನ ನಿಷೇಧದ ಮಧ್ಯೆ ತಡೆಬೇಲಿಗೆ ಸಿಲುಕಿದ ಟೆಂಪೋ!!

  • 22 Dec 2024 04:16:17 PM

ಬಂಟ್ವಾಳ: ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಬ್ರಿಟಿಷ್ ಕಾಲದ ಹಳೆಯ ಸೇತುವೆಯಲ್ಲಿ ಘನ ವಾಹನಗಳ ಸಂಚಾರಕ್ಕೆ ನಿಷೇಧವಿದ್ದರೂ ಸಹ ಚಾಲಕನ ನಿರ್ಲಕ್ಷ್ಯದಿಂದ ಟಾಟಾ ಏಸ್ ಗೂಡ್ಸ್ ಟೆಂಪೋವೊಂದು ಶನಿವಾರ (ಡಿ. 21) ಬೆಳಗ್ಗೆ ಸೇತುವೆಯ ಮೇಲೆ ಸಿಲುಕಿಕೊಂಡ ಘಟನೆ ನಡೆದಿದೆ.

 

ಬಿ.ಸಿ.ರೋಡಿನಿಂದ ಪಾಣೆಮಂಗಳೂರಿನತ್ತ ಸಾಗುತ್ತಿದ್ದ ಘನ ವಾಹನವು, ಸೇತುವೆಯ ಮೇಲೆ ಬಲವಾಗಿ ನುಗ್ಗಿದ್ದರಿಂದ ಘನ ವಾಹನಗಳಿಗೆ ನಿಷೇಧ ಕಲ್ಪಿಸಿ ಹಾಕಿದ್ದ ಕಬ್ಬಿಣದ ತಡೆಬೇಲಿಗೆ ಸಿಕ್ಕಿ ಬಿದ್ದಿದೆ.

 

ಈ ವಾಹನವು ಶಂಭೂರು ಭಾಗದಿಂದ ಮಸಾಲೆ ಪೌಡರ್ ಮಾರಾಟಕ್ಕಾಗಿ ಹೋಗುತ್ತಿತೆಂದು ತಿಳಿದುಬಂದಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಚಾಲಕನಿಗೆ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

 

 

ಬ್ರಿಟಿಷ್ ಕಾಲದಲ್ಲಿ ನಿರ್ಮಿತವಾದ ಈ ಸೇತುವೆಯಲ್ಲಿ ಹಲವು ವರ್ಷಗಳ ಹಿಂದೆಯೇ ಘನ ವಾಹನಗಳ ಸಂಚಾರಕ್ಕೆ ಜಿಲ್ಲಾಧಿಕಾರಿ ನಿಷೇಧ ಹೊರಡಿಸಿದ್ದರು.

 

ಆದರೆ, ಸ್ಥಳೀಯಾಡಳಿತದ ನಿರ್ಲಕ್ಷ್ಯದ ಕಾರಣದಿಂದ ಬೃಹತ್ ವಾಹನಗಳ ಸಂಚಾರ ನಡೆಯುತ್ತಿತ್ತು.

 

ಕಳೆದ ಮಳೆಗಾಲದಲ್ಲಿ ಸೇತುವೆ ಬಿರುಕು ಬಿದ್ದಿದೆ ಎಂಬ ಕಾರಣದಿಂದ ತಾತ್ಕಲಿಕ ತಡೆ ಬೇಲಿಯನ್ನು ಹಾಕಲಾಗಿತ್ತು.

 

ಆದರೆ ಅಕ್ರಮ ಮರಳು ಸಾಗಾಟ ಲಾರಿಗಳು ತಡೆಬೇಲಿಯನ್ನು ಒಡೆದು ಹೋಗಿದ್ದರಿಂದ ಕಬ್ಬಿಣದ ತಡೆಬೇಲಿಯನ್ನು ನಿರ್ಮಾಣ ಮಾಡಲಾಗಿತ್ತು.

 

ಅದೇ ತಡೆಬೇಲಿಯಲ್ಲಿ ಟೆಂಪೋ ಸಿಲುಕಿಬಿದ್ದಿದೆ. ಇದರಿಂದ ಸಂಚಾರಕ್ಕೆ ತೀವ್ರ ಅಡಚಣೆಯಾಗಿ ಸಿಲುಕಿದ ವಾಹನವನ್ನು ತೆಗಿಯಲು ಸ್ಥಳೀಯರು ಹರಸಾಹಸ ಪಟ್ಟರು.

 

ಸ್ಥಳೀಯಾಡಳಿತವು ಇದಕ್ಕೆ ತಕ್ಷಣವೇ ಅಗತ್ಯ ಕ್ರಮ ಕೈಗೊಂಡು, ಈ ಪುರಾತನ ಸೇತುವೆಯ ಪರಿಸ್ಥಿತಿ ಸುಧಾರಣೆಗೆ ಮುಂದಾಗಬೇಕೆಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.