ಮಂಗಳೂರು:ಮನುಷ್ಯನ ಆಸೆ- ಆಕಾಂಕ್ಷೆಗಳಿಗೆ ಮಿತಿಯೆಂಬುವುದೇ ಇಲ್ಲ. ಮಾನವರು ತನ್ನ ಸ್ವಾರ್ಥವನ್ನು ಪೂರೈಸಿಕೊಳ್ಳಲು ಪ್ರಕೃತಿ ಮೇಲೆಯೂ ದಬ್ಬಾಳಿಕೆ ನಡೆಸುತ್ತಿದ್ದಾರೆ. ಅದರ ಫಲವೇ ಇಂದು ನಾವು ಉಸಿರಾಡುವ ಆಮ್ಲಜನಕದ ಕೊರತೆಯನ್ನು ಎದುರಿಸುತ್ತಿರುವುದು.
ರಾಷ್ಟ್ರ ರಾಜಧಾನಿ ದೆಹಲಿ ಇಂದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವುದೇ ಉಸಿರಾಡುವ ಗಾಳಿಯ ಕೊರತೆಯಿಂದಾಗಿ. ವಾಯುಮಾಲಿನ್ಯ ಕೂಡಾ ಅಲ್ಲಿ ಹೆಚ್ಚಿದ್ದು ಜನರು ಉಸಿರಾಡಲು ಶುದ್ಧ ಗಾಳಿ ಸಿಗದೆ ಮೃತಪಡುತ್ತಿದ್ದಾರೆ. ಇದೀಗ ಈ ಆತಂಕ ನಮ್ಮ ಕರಾವಳಿಯಲ್ಲೂ ಸೃಷ್ಟಿಯಾಗಿದೆ.
ಮಂಗಳೂರಿನಲ್ಲಿ ಉಸಿರಾಡುವ ಗಾಳಿಯ ಗುಣಮಟ್ಟ ಕುಸಿತ..!
ಮಂಗಳೂರಿನಲ್ಲಿ ನಾವು ಉಸಿರಾಡುವ ಗಾಳಿಯ ಗುಣಮಟ್ಟ ದಿನೇದಿನೇ ಕುಸಿಯುತ್ತಿದ್ದು, ಮಾಲಿನ್ಯದ ಪ್ರಮಾಣ ಅಪಾಯಕಾರಿಯಾಗುತ್ತಿದೆ. ವಾಯುಮಾಲಿನ್ಯ ತಡೆಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮಂಗಳೂರು ಕೂಡಾ ಮತ್ತೊಂದು ದಿಲ್ಲಿಯಾದೀತು ಎಂದು ಈಗಲೇ ಪರಿಸರ ಸಂಘಟನೆಗಳು ಖಡಕ್ ಆಗಿ ಎಚ್ಚರಿಕೆಯನ್ನು ನೀಡಿದೆ.
ಡಬ್ಲ್ಯುಎಚ್ ಒ ಮಾರ್ಗಸೂಚಿಗೆ ಹೋಲಿಸಿದಾಗ, ಗಾಳಿಯಲ್ಲಿ ಪಿಎಂ 2.5 ಕಣಗಳ ಮಟ್ಟವು ಮಂಗಳೂರಿನಲ್ಲಿ 6ರಿಂದ 7 ಪಟ್ಟು ಹೆಚ್ಚಾಗಿದೆ ಎಂದು ಗ್ರೀನ್ ಪೀಸ್ ವರದಿ ಎಚ್ಚರಿಸಿದೆ. ಕರಾವಳಿ ಭಾಗದಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ ಪ್ರಮಾಣದಲ್ಲೂ ಏರಿಕೆ ಕಂಡಿದೆ ಎಂದು ಪರಿಸರ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಉಸಿರಾಡುವ ಗಾಳಿಯ ಗುಣಮಟ್ಟ ಕುಸಿಯಲು ಕಾರಣವೇನು..?
ವಾಯುಮಾಲಿನ್ಯ, ಉಸಿರಾಡುವ ಗಾಳಿಯ ಗುಣಮಟ್ಟ ಕುಸಿತ, ತಾಪಮಾನ ಏರಿಕೆಗೆ ಹಲವು ಕಾರಣಗಳಿದ್ದರೂ ನಗರದಲ್ಲಿ ಮಾಯವಾಗುತ್ತಿರುವ ಹಸುರೀಕರಣ ಪ್ರಮುಖ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.
ಅಭಿವೃದ್ಧಿ ಹೆಸರಿನಲ್ಲಿ ವೃಕ್ಷಗಳ ಮಾರಣಹೋಮ ನಡೆಯುತ್ತಿದ್ದು ದಿನೇದಿನೇ ತಾಪಮಾನ ಏರಿಕೆಯಾಗುತ್ತಿದೆ. ಕೆಲವು ವರ್ಷಗಳ ಹಿಂದೆ ಕಂಕನಾಡಿಯ ಫಾದರ್ ಮುಲ್ಲರ್ ರಸ್ತೆಯ ಇಕ್ಕೆಲಗಳಲ್ಲಿ ಬೃಹತ್ ಗಾತ್ರದ ಅದೆಷ್ಟೋ ಮರಗಳಿದ್ದವು. ಈ ಮರಗಳು ಹಕ್ಕಿಗಳ ಆವಾಸ ಸ್ಥಾನವಾಗಿದ್ದವಲ್ಲದೆ, ಪರಿಸರ ತಂಪಾಗಿರಲು ಕೂಡಾ ಸಹಕಾರಿಯಾಗಿತ್ತು.
ಆದರೆ ಸ್ಮಾರ್ಟ್ ಸಿಟಿ ಕಾಮಗಾರಿ, ಅಭಿವೃದ್ಧಿ ನೆಪದಲ್ಲಿ ಅದನ್ನೂ ಕಡಿದು ಹಾಕಲಾಗಿದೆ. ಇದರ ಜೊತೆಗೆ ಮಿತಿಮೀರಿದ ವಾಹನಗಳ ಭರಾಟೆಯಿಂದ, ಹಳೇ ವಾಹನಗಳ ಕಾರುಬಾರಿನಿಂದಾಗಿ ಪರಿಸರ ಸಂಪೂರ್ಣವಾಗಿ ಮಲಿನಗೊಳ್ಳುತ್ತಿದೆ. ಇದರಿಂದ ಉಸಿರಾಡುವ ಗಾಳಿಯ ಗುಣಮಟ್ಟ ಕೂಡಾ ಕುಸಿತ ಕಾಣುತ್ತಿದೆ.
ಈಗಿಂದೀಗಲೆ ಮುನ್ನೆಚ್ಚರಿಕೆ ಕ್ರಮ ವಹಿಸದಿದ್ದರೆ ಮುಂದೆ ಕರಾವಳಿಗರೂ ಕೂಡಾ ಉಸಿರಾಡಲು ಶುದ್ಧ ಗಾಳಿ ಸಿಗದೆ ಸಾಯುವ ಪರಿಸ್ಥಿತಿ ನಿರ್ಮಾಣವಾಗುದಂತೂ ಸತ್ಯ...