ಸುಬ್ರಹ್ಮಣ್ಯ ಅರ್ಚಕರ ಮನೆಯಲ್ಲಿ ಕಳ್ಳತನ..!! ನಗ-ನಗದು ಕದ್ದು ಎಸ್ಕೇಪ್ ಆದ ಖದೀಮರು..!

  • 24 Dec 2024 03:07:07 PM

ಸುಬ್ರಹ್ಮಣ್ಯ: ಇತ್ತೀಚೆಗೆ ದ.ಕ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ. ಮೊನ್ನೆ ತಾನೇ ಚಡ್ಡಿ ಗ್ಯಾಂಗೊಂದರ ಬಗ್ಗೆ ವರದಿಯಾಗಿದ್ದ ಸುದ್ದಿಗಳನ್ನು ನೀವು ನೋಡಿರಬಹುದು. ಇದೀಗ ಅಚ್ಚರಿ ಎಂಬಂತೆ ಸುಬ್ರಹ್ಮಣ್ಯದಲ್ಲೊಂದು ಇಂತಹ ಘಟನೆ ನಡೆದಿದೆ. 

 

ಸುಬ್ರಹ್ಮಣ್ಯ ಅರ್ಚಕರ ನಗ-ನಗದು ದೋಚಿದ ಕಳ್ಳರು..!

 

ಸುಬ್ರಹ್ಮಣ್ಯ ಮಠದಲ್ಲಿ ಅರ್ಚಕರಾಗಿರುವ ಆನಂದ ಭಟ್‌ ಅವರು ಡಿ.22ರಂದು ಬೆಳಗಿನ ಜಾವ ಎಂದಿನಂತೆ ಅರ್ಚಕ ವೃತ್ತಿ ನಿರ್ವಹಿಸಲು ಮಠಕ್ಕೆ ತೆರಳಿದ್ದರು. ಕೆಲಸ ಮುಗಿಸಿಕೊಂಡು ಬೆಳಗ್ಗೆ ಮನೆಗೆ ಬಂದಾಗ ಮನೆಯ ಮುಂಬಾಗಿಲಿನ ಬೀಗವನ್ನು ತೆಗೆದಿದ್ದು ಕಂಡುಬಂದಿತ್ತು.

 

ಮನೆಯ ಒಳಪ್ರವೇಶಿಸಿ ನೋಡಿದಾಗ ಗೋಡ್ರೇಜ್ ತೆರೆದಿದ್ದು, ಪರಿಶೀಲಿಸಿದಾಗ ಅದರೊಳಗಡೆ ಪರ್ಸ್‌ನಲ್ಲಿಟ್ಟಿದ್ದ ಸುಮಾರು 25 ಸಾವಿರ ರೂ. ಹಣ ಮತ್ತು 1.15 ಲಕ್ಷ ರೂ. ಮೌಲ್ಯದ ಸುಮಾರು 23 ಗ್ರಾಂ ಚಿನ್ನಾಭರಣ ಕಳವಾಗಿರುವುದು ಕಂಡುಬಂದಿದೆ. ಇದರಿಂದ ಅರ್ಚಕರು ಗಾಬರಿಗೊಂಡು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

 

ಪೊಲೀಸರಿಂದ ತನಿಖೆ ಆರಂಭ..!

 

ಸುಬ್ರಹ್ಮಣ್ಯ ಮಠದ ಬಳಿ ಇಂತಹ ಘಟನೆ ನಡೆದಿರೋದು ಅತ್ಯಂತ ಅಪರೂಪ. ಹೀಗಿರುವಾಗ ಅರ್ಚಕರ ಮನೆಯಲ್ಲಿ ಇಟ್ಟಿದ್ದ ಅಷ್ಟೂ ಹಣ, ಆಭರಣವನ್ನು ಯಾರೋ ಖದೀಮರು ದೋಚಿಕೊಂಡು ಹೋಗಿದ್ದಾರೆ.

 

ಈ ಬಗ್ಗೆ ಅವರು ನೀಡಿದ ದೂರಿನಂತೆ ಸುಬ್ರಹ್ಮಣ್ಯ ಪೊಲೀಸರು ಹಾಗೂ ತನಿಖಾ ತಂಡದ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿದೆ.