ಅಜಾತಶತ್ರು, ಹಿರಿಯ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನ...!!

  • 25 Dec 2024 11:57:35 AM

ಭಾರತ ದೇಶ ಸ್ವಾತಂತ್ರ್ಯ ಪಡೆದುಕೊಂಡ ನಂತರ ಅದೆಷ್ಟೋ ವರ್ಷ ಬುದ್ಧಿವಂತ, ಚಾಣಾಕ್ಷ ರಾಜಕಾರಣಿಗಳನ್ನು, ರಾಜಕೀಯ ವ್ಯವಸ್ಥೆಯನ್ನು ನೋಡಿರಬಹುದು. ತಮ್ಮದೇ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಳ್ಳುತ್ತಾ ದೇಶದ ಅಭಿವೃದ್ಧಿಗೆ ಪೂರಕವಾದ ಸಿದ್ಧಾಂತದಲ್ಲಿ ನಡೆದು ರಾಜಕೀಯದಲ್ಲಿದ್ದುಕೊಂಡೇ ದೇಶ ಸೇವೆಗೈದ ಅದೆಷ್ಟೋ ಧುರೀಣರು ನಮ್ಮ ರಾಷ್ಟ್ರದಲ್ಲಿದ್ದಾರೆ.

 

ಈ ಸಂದರ್ಭ ನಾವು ಭಾರತ ಕಂಡ ಅಜಾತ ಶತ್ರು, ಧೀಮಂತ ವ್ಯಕ್ತಿತ್ವ ಅಟಲ್ ಬಿಹಾರಿ ವಾಜಪೇಯಿ ಅವರನ್ನು ನಾವು ನೆನೆಯಲೇಬೇಕು. 21ನೇ ಶತಮಾನದಲ್ಲಿ ಭಾರತದ ಪರಿವರ್ತನೆಯ ಶಿಲ್ಪಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾರತ ದೇಶ ಧನ್ಯವಾಗಿರಬೇಕು‌. ಇಂದು ಅವರ ನೂರನೇ ವರ್ಷದ ಜನ್ಮದಿನ..

 

ನೆಹರು ನಿಧನರಾದಾಗ ಕವನದ ಮುಖೇನ ಶ್ರದ್ಧಾಂಜಲಿ ಅರ್ಪಿಸಿದ್ದ ವಾಜಪೇಯಿ...!!

 

ಹೌದು. 1964ರಲ್ಲಿ ನೆಹರೂ ತೀರಿಕೊಂಡಾಗ, ವಾಜಪೇಯಿ ಕವನದ ಮೂಲಕವೇ ಶ್ರದ್ಧಾಂಜಲಿ ಸಲ್ಲಿಸಿದ್ದರು. “ಭಾರತ ಮಾತೆ ದುಃಖಿತಳಾಗಿದ್ದಾಳೆ, ಅವಳ ಪ್ರೀತಿಯ ರಾಜಕುಮಾರ ಚಿರನಿದ್ರೆಗೆ ಜಾರಿದ್ದಾನೆ’ ಎಂಬ ಕವಿತೆ, ನೆರೆದಿದ್ದ ಜನರನ್ನು ಮಂತ್ರಮುಗ್ಧಗೊಳಿಸಿತ್ತು.

 

ಮೌನಕ್ಕೆ ಶರಣಾಗಿಸಿತ್ತು. 1996, ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವ ಸಂದರ್ಭದಲ್ಲಿ, ಹಾರ್‌ ನಹೀ ಮಾನೂಂಗಾ, ರಾರ್‌ ನಹೀ ಠಾನೂಂಗಾ, ಕಾಲ್‌ ಕೆ ಕಪಾಲ್‌ ಪರ್‌ ಲಿಖ್‌ತಾ ಮಿಟಾತಾ ಹೂಂ, ಗೀತ ನಯಾ ಗಾತಾ ಹೂಂ’ ಎಂಬ ಕವಿತೆ ಹೇಳಿ, ವಿರೋಧಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದ್ದರು. ಜೀತಾ ಜಾಗ್ರತಾ ರಾಷ್ಟ್ರಪುರುಷ’, ಝುಕಾ ನಹೀಂ ಸಕ್ತೆ’, ಏ ವಂದನ್‌ ಕೀ ಧರತಿ’ ಮುಂತಾದ ಅವರ ಕವಿತೆಗಳು ಬಹಳ ಪ್ರಸಿದ್ಧಿಗೊಂಡಿವೆ. ಒಬ್ಬ ರಾಜಕಾರಣಿ ಮಾತ್ರವಲ್ಲದೆ ಇವರು ಸ್ವಚ್ಛ ಮನಸ್ಸಿನ ಕವಿಯಾಗಿಯೂ ಗುರುತಿಸಿಕೊಂಡಿದ್ದರು.

 

ಸಂವಿಧಾನವನ್ನು ರಕ್ಷಿಸುವ ವಿಷಯದಲ್ಲಿ ಮುಂಚೂಣಿಯಲ್ಲಿದ್ದ ರಾಜಕಾರಣಿ...!!

 

ಅಟಲ್ ಬಿಹಾರಿ ವಾಜಪೇಯಿ ಅವರು ಯಾವತ್ತೂ ಅಧಿಕಾರಕ್ಕೆ ಅಂಟಿಕೊಂಡಿರಲಿಲ್ಲ. ರಾಜಕೀಯದಲ್ಲಿ ಕೊಳಕು ಹಾದಿಯಲ್ಲಿ ನಡೆಯುವುದಕ್ಕಿಂತ ರಾಜೀನಾಮೆ ನೀಡುವುದೇ ಉತ್ತಮ ಎಂದು ಅವರು ಬಲವಾಗಿ ನಂಬಿದ್ದರು. ಸಂವಿಧಾನವನ್ನು ರಕ್ಷಿಸುವ ಬದ್ಧತೆಯ ವಿಷಯಕ್ಕೆ ಬಂದಾಗ, ಅಟಲ್ ಜಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ.

 

ಡಾ. ಶ್ಯಾಮಪ್ರಸಾದ್ ಮುಖರ್ಜಿಯವರ ಹುತಾತ್ಮತೆಯಿಂದ ಅವರು ಆಳವಾಗಿ ಪ್ರಭಾವಿತರಾಗಿದ್ದರು. ವರ್ಷಗಳ ನಂತರ, ಅವರು ತುರ್ತು ಪರಿಸ್ಥಿತಿ ವಿರೋಧಿ ಚಳವಳಿಯ ಆಧಾರಸ್ತಂಭವಾಗಿದ್ದರು. ತುರ್ತು ಪರಿಸ್ಥಿತಿಯ ನಂತರ 1977ರ ಚುನಾವಣೆಯ ಸಮಯದಲ್ಲಿ, ಅವರು ತಮ್ಮ ಪಕ್ಷವನ್ನು ಜನತಾ ಪಕ್ಷದೊಂದಿಗೆ ವಿಲೀನಗೊಳಿಸಲು ಒಪ್ಪಿಕೊಂಡರು.

 

ಇದು ಅವರಿಗೆ ಮತ್ತು ಇತರರಿಗೆ ನೋವಿನ ನಿರ್ಧಾರವಾಗಿತ್ತಾದರೂ ಸಂವಿಧಾನವನ್ನು ರಕ್ಷಿಸುವುದು ಅವರ ಪ್ರಮುಖ ಆದ್ಯತೆಯಾಗಿತ್ತು. ಒಟ್ಟಿನಲ್ಲಿ ದೇಶ ಕಂಡ ಸಜ್ಜನ, ರಾಜಕಾರಣದ ದಿಗ್ಗಜ ಅಟಲ್ ಬಿಹಾರಿ ವಾಜಪೇಯಿ 100ನೇ ಜನ್ಮ ವಾರ್ಷಿಕೋತ್ಸವದಂದು, ಅವರ ಆದರ್ಶಗಳನ್ನು ಸಾಕಾರಗೊಳಿಸಲು ಮತ್ತು ಭಾರತಕ್ಕಾಗಿ ಅವರ ಕನಸನ್ನು ನನಸಾಗಿಸಲು ನಮ್ಮನ್ನು ನಾವು ಸಮರ್ಪಿಸಿಕೊಳ್ಳೋಣ.

 

ಅವರ ಉತ್ತಮ ಆಡಳಿತ, ಏಕತೆಗೆ ಮತ್ತು ಪ್ರಗತಿಯ ತತ್ವಗಳನ್ನು ಒಳಗೊಂಡ ಸುಭದ್ರ ಭಾರತವನ್ನು ನಿರ್ಮಿಸಲು ನಾವು ಶ್ರಮಿಸೋಣ..