ಬ್ಯಾಂಕ್ ಕೆವೈಸಿಗಾಗಿ ವಾಟ್ಸಾಪ್ ಲಿಂಕ್ ಕ್ಲಿಕ್ ಮಾಡಿದ ಮಂಗಳೂರು ಯುವಕನಿಗೆ ಬಿಗ್ ಶಾಕ್..? ಅಕೌಂಟ್ ನಲ್ಲಿದ್ದ ಲಕ್ಷ ರೂ ಮಂಗಮಾಯ...!!

  • 25 Dec 2024 12:04:15 PM

ಮಂಗಳೂರು: ತಂತ್ರಜ್ಞಾನ ಮುಂದುವರೆದಂತೆ ಸೈಬರ್ ಕ್ರೈಮ್ ಪ್ರಕರಣಗಳು ಕೂಡಾ ಹೆಚ್ಚಾಗುತ್ತಲೇ. ಜನರಿಗೆ ಗೊತ್ತೇ ಆಗದಂತೆ ಸೈಬರ್ ಕ್ರಿಮಿನಲ್ಸ್ ಗಿಮಿಕ್ ಉಪಯೋಗಿಸಿ ಲಕ್ಷ ಲಕ್ಷ ಹಣವನ್ನು ಗುಳುಂ ಮಾಡುತ್ತಾರೆ. ಈ ರೀತಿ ಮೋಸ ಹೋಗಿ ಅದೆಷ್ಟೋ ಮೌಲ್ಯದ ಹಣ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ನೂರಾರು ಜನರಿದ್ದಾರೆ.

 

ಅದಕ್ಕಾಗಿಯೇ ಮೊಬೈಲ್ ಗೆ ಬಂದ ಅಪರಿಚಿತ ಕಾಲ್, ವೀಡಿಯೋ ಕಾಲ್, ಅನುಮಾನಸ್ಪದ ಸಂದೇಶಗಳನ್ನು ಒಮ್ಮೆಲೆ ಕ್ಲಿಕ್ ಮಾಡಿ ನೋಡಬಾರದು. ಆದಷ್ಟು ಮುನ್ನೆಚ್ಚರಿಕೆ ವಹಿಸದಿದ್ದರೆ ನಾಳೆ ನಾವೂ ನಮ್ಮ ಖಾತೆ ಹಣ ಖಾಲಿ ಮಾಡಿ ಕೂರಬೇಕಾದ ದುರಂತ ಸ್ಥಿತಿ ಬರಬಹುದೇನೋ. ಇದೀಗ ಇದೇ ರೀತಿ ಮೋಸಕ್ಕೆ ಸಿಲುಕಿ ಕಣ್ಣೀರು ಹಾಕುತ್ತಿರುವ ಮಂಗಳೂರಿನ ವ್ಯಕ್ತಿಯ ಕಥೆ ಕೇಳಿದ್ರೆ ನಿಮಗೂ ಬೇಸರವಾಗದಿರದು. 

 

ಕೆವೈಸಿ ಅಪ್ಡೇಟ್ ಲಿಂಕ್ ಎಂದು ಕ್ಲಿಕ್ ಮಾಡಿ ಹಣ ಕಳೆದುಕೊಂಡ ಗ್ರಾಹಕ...!!

 

ಬ್ಯಾಂಕ್ ಸೇರಿದಂತೆ ಕೆಲವಡೆ ಕೆವೈಸಿ ಕಡ್ಡಾಯ. ಖಾತೆ ತೆರೆದು ವಹಿವಾಟು ನಡೆಸುತ್ತಿದ್ದರೂ ಕೆವೈಸಿ ಮಾಡಿಲ್ಲದಿದ್ದರೆ ಖಾತೆ ಸ್ಥಗಿತಗೊಳ್ಳುವ ಅಪಾಯವಿದೆ. ಅಗತ್ಯ ದಾಖಲೆಗಳನ್ನು ನೀಡಿ ಸುಲಭವಾಗಿ ಕೆವೈಸಿ ಅಪ್‌ಡೇಟ್ ಮಾಡಿಕೊಳ್ಳಬಹುದು.

 

ಹಲವರು ಕೆವೈಸಿ ಅಪ್‌ಡೇಟ್ ಮಾಡಿಕೊಳ್ಳಲು ಮರೆತಿರುತ್ತಾರೆ. ಹೀಗೆ ಮಂಗಳೂರಿನ ಕೆನರಾ ಬ್ಯಾಂಕ್ ಗ್ರಾಹಕ ಕೆವೈಸಿ ಅಪ್‌ಡೇಟ್ ಮಾಡಿಲ್ಲ. ಈತನ ವ್ಯಾಟ್ಸಾಪ್‌ಗೆ ಕೆವೈಸಿ ಅಪ್‌ಡೇಟ್ ಮಾಡುವಂತೆ ಲಿಂಕ್ ಬಂದಿದೆ. ಕೆವೈಸಿ ಅಪ್‌ಡೇಟ್ ಮಾಡದಿದ್ದರೆ ಖಾತೆ ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ಸಂದೇಶ ಓದಿದ ಈತ, ತಕ್ಷಣವೇ ವ್ಯಾಟ್ಸಾಪ್ ಲಿಂಕ್ ಕ್ಲಿಕ್ ಮಾಡಿ ಅಪ್‌‌ಡೇಟ್ ಮಾಡಲು ಮುಂದಾಗಿದ್ದಾನೆ. ಇಷ್ಟೇ ನೋಡಿ, ಈತನ ಖಾತೆಯಲ್ಲಿದ್ದ 6.6 ಲಕ್ಷ ರೂಪಾಯಿ ಗುಳುಂ ಆಗಿದೆ.

 

ಕ್ರಿಕೆಟ್ ಗ್ರೂಪ್ ಆಗಿ ಕ್ರಿಯೇಟ್ ಆಗಿದ್ದ ಗ್ರೂಪ್ ಏಕಾಏಕಿ ಕೆನರಾ ಬ್ಯಾಂಕ್ ವಾಟ್ಸಾಪ್ ಗ್ರೂಪ್ ಆಗಿ ಬದಲು...!!

 

ಮಂಗಳೂರಿನ ಕಾವೂರು ಠಾಣಾ ವ್ಯಾಪ್ತಿಯ ನಿವಾಸಿ ಇದೀಗ ಹಣ ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ. ವ್ಯಾಟ್ಸಾಪ್‌ನಲ್ಲಿ ಇದ್ದ ಹಲವು ಗ್ರೂಪ್‌ಗಳ ರೀತಿಯಲ್ಲೇ ಕೆಲ ದಿನಗಳ ಹಿಂದೆ ಗ್ರೂಪ್ ಕ್ರಿಯೇಟ್ ಆಗಿತ್ತು. ದುರ್ಗಿ ಕ್ರಿಕೆಟ್ ಉತ್ಸವ್ ಗ್ರೂಪ್ ಕ್ರಿಯೇಟ್ ಆಗಿತ್ತು.

 

ಏಕಾಏಕಿ ಈ ಗ್ರೂಪ್ ಕೆನರಾ ಬ್ಯಾಂಕ್ ಗ್ರೂಪ್ ಆಗಿ ಬದಲಾಗಿತ್ತು. ಈ ಗ್ರೂಪ್‌ನಲ್ಲಿ ಕೆನರಾ ಬ್ಯಾಂಕ್ ಗ್ರಾಹಕರು ಕೆವೈಸಿ ಅಪ್‌ಡೇಟ್ ಮಾಡಿ ಎಂದು ಸೂಚಿಸಲಾಗಿತ್ತು. ಇಷ್ಟೇ ಅಲ್ಲ ಯಾರೆಲ್ಲಾ ಆಧಾರ್ ಸಂಖ್ಯೆ, ಪಾನ್ ಕಾರ್ಡ್ ಸೇರಿದಂತೆ ಇತರ ಅಗತ್ಯ ದಾಖಲೆ ನೀಡಿ ಕೆವೈಸಿ ಅಪ್‌ಡೇಟ್ ಮಾಡಿಲ್ಲವೋ ಅವರ ಖಾತೆ ಸ್ಥಗಿತಗೊಳ್ಳಲಿದೆ ಎಂದು ಎಚ್ಚರಿಕೆಯ ಸಂದೇಶವನ್ನು ಕೂಡಾ ರವಾನಿಸಲಾಗಿತ್ತು. ಕೆನರಾ ಬ್ಯಾಂಕ್ ಕೆವೈಸಿ ಅಪ್‌ಡೇಟ್‌ಗೆ ಲಿಂಕ್ ನೀಡಲಾಗಿತ್ತು.

 

ಈ ಲಿಂಕ್ ಕ್ಲಿಕ್ ಮಾಡಿದರೆ ನೇರವಾಗಿ ಅನಧಿಕೃತ ಆ್ಯಪ್ ಡೌನ್ಲೋಡ್‌ಗೆ ಸೂಚಿಸಿತ್ತು. ಆದರೆ ಮೇಲ್ನೋಟಕ್ಕೆ ಈ ಆ್ಯಪ್ ಕೆನರಾ ಬ್ಯಾಂಕ್ ಆ್ಯಪ್ ರೀತಿಯಲ್ಲೇ ಕಾಣುತ್ತಿತ್ತು. ಇದರ ಬಣ್ಣ, ಕೆನರಾ ಬ್ಯಾಂಕ್ ಹೆಸರು, ಲೋಗೋ ಸೇರಿದಂತೆ ಎಲ್ಲವೂ ನಕಲು ಮಾಡಲಾಗಿತ್ತು. ಈ ಆ್ಯಪ್‌ನಲ್ಲಿ ದೊಡ್ಡದಾಗಿ ಎಂದಿಗೂ ಒಟಿಪಿ ಹಂಚಿಕೊಳ್ಳಬೇಡಿ ಎಂದು ಬರೆದಿತ್ತು.

 

ಹೀಗಾಗಿ ಕೆನರಾ ಬ್ಯಾಂಕ್ ಗ್ರಾಹಕನಿಗೆ ಇದು ನಕಲಿ ಆ್ಯಪ್ ಅನ್ನೋ ಅನುಮಾನ ಕೂಡ ಬಂದಿಲ್ಲ. ಹಾಗಾಗಿ ಇವರು ವಂಚನೆಗೊಳಗಾಗಿದ್ದಾರೆ. ಇನ್ಮುಂದೆ ಎಲ್ಲರೂ ಈ ಬಗ್ಗೆ ಎಚ್ಚರ ವಹಿಸಬೇಕು. ಯಾವುದೇ ಕಾರಣಕ್ಕೂ ಬ್ಯಾಂಕ್ ಕಡೆಯಿಂದ ಅಧಿಕೃತವಾಗಿ ಕೆವೈಸಿ ಲಿಂಕ್ ಮಾಡಿ ಎಂಬ ಸಂದೇಶವನ್ನು ಕಳುಹಿಸುವುದಿಲ್ಲ. ಎಚ್ಚರಿಕೆ ವಹಿಸದಿದ್ದರೆ ಈ ರೀತಿ ಹಣ ಕಳೆದುಕೊಂಡು ರೋದಿಸುವ ಸಂದರ್ಭ ಒದಗಿಬಂದೀತು...