ಉಡುಪಿ| ತವರಿಗೆ ಆಗಮಿಸಿದ ವೀರ ಯೋಧ ಅನೂಪ್ ಪಾರ್ಥಿವ ಶರೀರಕ್ಕೆ ಗಣ್ಯರಿಂದ ಅಂತಿಮ‌ ನಮನ!;ಶನಿವಾರವಷ್ಟೇ ರಜೆ ಮುಗಿಸಿ ಸೇನೆಗೆ ತೆರಳಿದ್ದ ಅನೂಪ್!

  • 26 Dec 2024 02:50:47 PM

ಉಡುಪಿ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ನಲ್ಲಿ ನಡೆದ ಸೇನಾ ವಾಹನದ ಭೀಕರ ಅಪಘಾತದಲ್ಲಿ ಜೀವಾಂತ್ಯಗೊಳಿಸಿದ ಐದು ಜನ ಯೋಧರ ಪೈಕಿಯಲ್ಲಿ ಕರ್ನಾಟಕದ ಉಡುಪಿ ಮೂಲದ ಯೋಧ ಅನೂಪ್ ಅವರ ಪಾರ್ಥೀವ ಶರೀರ ತವರು ಸೇರಿದ್ದು, ಗಣ್ಯಾತಿಗಣ್ಯರು ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ.ಈ ಬಗೆಗಿನ ವರದಿ ಇಲ್ಲಿದೆ‌.

 

ಗಣ್ಯರಿಂದ ಅಂತಿಮ ನಮನ!

 

ಯೋಧ ಅನೂಪ್ ಅವರ ಪಾರ್ಥಿವ ಶರೀರ ಉಡುಪಿಯ‌ ಕುಂದಾಪುರ ತಾಲೂಕಿನ ಬೀಜಾಡಿ ತಲುಪಿದ್ದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ, ಉಡುಪಿ‌ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಸೇರಿದಂತೆ ಸೇನಾಧಿಕಾರಿಗಳು ಹಾಗೂ ಗಣ್ಯರು ಅಂತಿಮ‌ ನಮನ ಸಲ್ಲಿಸಿದ್ದಾರೆ.

 

ಇನ್ನು ಬೀಜಾಡಿಯ ಪಡು ಸರ್ಕಾರಿ ಶಾಲೆಯಲ್ಲಿ ಅನೂಪ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು, ಇಂದು ಸಂಜೆ ಬೀಜಾಡಿ ಕಡಲ ಕಿನಾರೆಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು‌ ಕುಟುಂಬ ಮೂಲಗಳು‌ ತಿಳಿಸಿವೆ.

 

ಶನಿವಾರವಷ್ಟೇ ಸೈನ್ಯಕ್ಕೆ ತೆರಳಿದ ಅನೂಪ್!

 

ಕಳೆದ 14 ವರ್ಷಗಳಿಂದ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ವೀರ ಯೋಧ ಅನೂಪ್ ಅವರ ಸಾವಿನಿಂದಾಗಿ‌ ಇಡೀ ಕುಟುಂಬ ಕಣ್ಣೀರ ಕಡಲಲ್ಲಿ ಮುಳುಗಿದೆ. ಅತ್ಯಂತ ಬಡತನದಲ್ಲಿ ಹುಟ್ಟಿ ಬೆಳೆದ ಅನೂಪ್ ಕಷ್ಟಪಟ್ಟು ದೇಶಸೇವೆಗೆ ತೆರಳಿದ್ದರು.

 

ಇವರ ದಕ್ಷ ಸೇವೆಯನ್ನು ಮೆಚ್ಚಿ ಮೇಲಾಧಿಕಾರಿಗಳು‌ ಇತ್ತೀಚೆಗಷ್ಟೇ ಇವರಿಗೆ ಹವಾಲ್ದಾರ್ ಆಗಿ ಭಡ್ತಿ ನೀಡಿದ್ದರು. ಇತ್ತೀಚೆಗಷ್ಟೇ 20 ದಿನಗಳ ರಜೆಯಲ್ಲಿ ಊರಿಗೆ ಬಂದಿದ್ದ ಅನೂಪ್ ತಮ್ಮ ಪತ್ನಿ ಹಾಗೂ 2 ವರ್ಷದ ಮಗುವಿನೊಂದಿಗೆ ಸುಂದರ ಕ್ಷಣಗಳನ್ನು ಕಳೆದಿದ್ದರು‌. ರಜೆ ಮುಗಿಸಿ ಶನಿವಾರ ಮತ್ತೆ ಸೈನ್ಯಕ್ಕೆ ತೆರಳಿದ ಅನೂಪ್ ಇದೀಗ ಶವವಾಗಿ ಮನೆ ತಲುಪಿದ್ದಾರೆ ಎಂಬುದೇ ನೋವಿನ ಸಂಗತಿ.