ತೆಲಂಗಾಣ: ಪ್ರತಿದಿನ ಸಮಾಜದಲ್ಲಿ ಒಂದಲ್ಲ ಒಂದು ರೀತಿಯ ಕ್ರೈಮ್ ಪ್ರಕರಣಗಳು ನಡೆಯುತ್ತಲೇ ಇರುತ್ತದೆ. ಕಾನೂನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತಿರುವ ಪೊಲೀಸರು ಪ್ರತೀ ಪ್ರಕರಣದ ಬೆನ್ನತ್ತಿ ನ್ಯಾಯ ಒದಗಿಸುವ ಕೆಲಸ ಮಾಡುತ್ತಲೇ ಇರುತ್ತಾರೆ.
ಆದರೆ ಇದೀಗ ಇಲ್ಲೊಂದು ಬೆಚ್ಚಿ ಬೀಳಿಸುವ ಪ್ರಕರಣ ವರದಿಯಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಹಿತ ಇಬ್ಬರು ಕಾನ್ಸ್ಟೇಬಲ್ಸ್ ಅವರೇ ಸಾವಿಗೆ ಶರಣಾಗಿದ್ದಾರೆ.
ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಸಬ್ಇನ್ಸ್ಪೆಕ್ಟರ್ ಮತ್ತು ಕಾನ್ಸ್‌ಟೇಬಲ್ಸ್...!!
ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಭಿಕ್ಕುನೂರಿನ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಾಯಿಕುಮಾರ್ ಮತ್ತು ಬಿಬಿಪೇಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾನ್ಸ್‌ಟೇಬಲ್ ಶೃತಿ ಮತ್ತು ನಿಖಿಲ್ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿರುವುದು ಜಿಲ್ಲೆಯಲ್ಲಿ ತೀವ್ರ ಸಂಚಲನವನ್ನು ಮೂಡಿಸಿದೆ.
ಪೊಲೀಸರ ಮಾಹಿತಿಯ ಪ್ರಕಾರ ಜಿಲ್ಲಾಸ್ಪತ್ರೆ ಸಮೀಪದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೪೪ರ ಅಡ್ಲೂರು ಎಲ್ಲರೆಡ್ಡಿ ಕೆರೆ ಬಳಿ ಎಸ್.ಐ ಸಾಯಿಕುಮಾರ್ ಅವರ ಕಾರು ಪತ್ತೆಯಾಗಿತ್ತು. ಅಲ್ಲದೇ ಅದೇ ಕಾರಿನ ಬಳಿ ಅವರ ಪಾದರಕ್ಷೆ ಕೂಡಾ ಸಿಕ್ಕಿದ್ದರಿಂದ ಪೊಲೀಸ್ ಅಧಿಕಾರಿಗಳು ಇದು ಆತ್ಮಹತ್ಯೆ ಎಂದು ಶಂಕಿಸಿದ್ದರು. ಮೃತದೇಹಕ್ಕಾಗಿ ನಿನ್ನೆಯಿಂದಲೇ ಶೋಧ ಕಾರ್ಯಾಚರಣೆ ಆರಂಭವಾಗಿದ್ದರೂ ಇಂದು ಲೈಫ್ ಗಾರ್ಡ್, ಅಗ್ನಿಶಾಮಕ ಸಿಬ್ಬಂದಿ ಕೆರೆಗೆ ಇಳಿದು ಮೃತದೇಹವನ್ನು ಹೊರತೆಗೆದಿದ್ದಾರೆ.
ಆತ್ಮಹತ್ಯೆಯ ಕಾರಣ ಇನ್ನೂ ನಿಗೂಢ...!! ಮೂವರ ಮಧ್ಯೆ ಏನಾಗಿತ್ತು...?
ಎಸ್ಐ ಸಾಯಿಕುಮಾರ್ ಅವರು ಈ ಹಿಂದೆ ಬಿಬಿಪೇಟೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇನ್ನುಳಿದ ಆತ್ಮಹತ್ಯೆ ಮಾಡಿಕೊಂಡ ಮಹಿಳಾ ಪೇದೆ ಮತ್ತು ಯುವಕನೂ ಕೂಡಾ ಅಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದರು.
ಆದರೆ ಇದೀಗ ಈ ಮೂವರು ಒಟ್ಟಿಗೆ ಜೀವಾಂತ್ಯಗೊಳಿಸಿದ ಕಾರಣ ಏನು..? ಇವರು ಮೂವರ ನಡುವೆ ಯಾವ ವಿಚಾರಕ್ಕೆ ವಾಗ್ವಾದ ನಡೆದಿತ್ತು..? ಇವರು ಇಂತಹ ನಿರ್ಧಾರಕ್ಕೆ ಧುಮುಕಲು ಕಾರಣವೇನು..? ಈ ಎಲ್ಲಾ ವಿಚಾರವು ಇನ್ನೂ ನಿಗೂಢವಾಗಿಯೇ ಉಳಿದಿದೆ. ಈ ಬಗ್ಗೆ ಚರ್ಚೆಯಾಗುತ್ತಿದ್ದು ಪೊಲೀಸರು ಈ ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ.