ಗ್ರಾಹಕನ ಸೋಗಿನಲ್ಲಿ ಜ್ಯುವೆಲ್ಲರಿ ಶಾಪ್ ಗೆ ಎಂಟ್ರಿ ಕೊಟ್ಟು ಚಿನ್ನ ಎಗರಿಸಿದ ಖತರ್ನಾಕ್ ಖದೀಮ...!

  • 28 Dec 2024 04:02:18 PM

ಕಾರ್ಕಳ: ಇತ್ತೀಚೆಗೆ ದಿನನಿತ್ಯ ಸಮಾಜದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಲೇ ಇರುತ್ತದೆ. ಹಣ ಪಡೆಯಲು ಜನರು ನಾನಾ ಅನ್ಯ ಮಾರ್ಗಗಳನ್ನು ಹಿಡಿಯುತ್ತಲೇ ಇರುತ್ತಾರೆ.

 

ತಪ್ಪು ದಾರಿಯಲ್ಲಿ, ಸುಲಭದ ಮಾರ್ಗದಲ್ಲಿ ಹೋಗಿ ಹಣ ಸಂಪಾದಿಸಲು ಜನರು ನಾನಾ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಇದೀಗ ಕಾರ್ಕಳದ ಜ್ಯುವೆಲ್ಲರಿ ಶಾಪ್ ನಲ್ಲಿ ನಡೆದ ಕಳ್ಳತನ ಪ್ರಕರಣ ಎಲ್ಲರನ್ನೂ ದಿಗಿಲು ಹುಟ್ಟಿಸಿದೆ. 

 

ಚಿನ್ನ ಖರೀದಿಸುವ ನೆಪದಲ್ಲಿ ಬಂದು ಗೋಲ್ಡ್ ಎಗರಿಸಿದ ಖದೀಮ...!!

 

ಹಾಡಹಗಲೇ ಜ್ಯುವೆಲ್ಲರಿ ಶಾಪ್‌ಗೆ ಗ್ರಾಹಕನ ಸೋಗಿನಲ್ಲಿ ನುಗ್ಗಿದ ಕಳ್ಳನೋರ್ವ ಲಕ್ಷಾಂತರ ಮೌಲ್ಯದ ಒಡವೆಗಳನ್ನು ಕದ್ದು ಎಸ್ಕೇಪ್ ಆದ ಘಟನೆ ಕಾರ್ಕಳದ ರಥಬೀದಿಯಲ್ಲಿ ಶುಕ್ರವಾರ ನಡೆದಿದೆ.

 

ಕಾರ್ಕಳ ಪೇಟೆಯ ರಥಬೀದಿ ರಸ್ತೆಯಲ್ಲಿರುವ ಈ ಜ್ಯುವೆಲ್ಲರಿ ಶಾಪ್ ಪ್ರಕಾಶ್‌ ವಸಂತ್‌ ಜಾದವ್‌ ಎಂಬವರ ಒಡೆತನದಲ್ಲಿದೆ. ಇಲ್ಲಿ ಅವರು ಇಲ್ಲದಿದ್ದಾಗ ಅವರ ಪತ್ನಿ ಜ್ಯುವೆಲ್ಲರಿ ಶಾಪ್ ನೋಡಿಕೊಳ್ಳುತ್ತಿದ್ದರು. ಇದೇ ಸಂದರ್ಭ ನೋಡಿಕೊಂಡು ಕಳ್ಳ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾನೆ. 

 

ನಡೆದ ಘಟನೆ ಏನು..? 

 

ಶುಕ್ರವಾರ ಮಧ್ಯಾಹ್ನ 1.30ರ ಸುಮಾರಿಗೆ ಗ್ರಾಹಕನ ರೀತಿಯಲ್ಲೇ ಅಂಗಡಿಯ ಒಳ ಪ್ರವೇಶಿಸಿದ ಯುವಕನೋರ್ವ ಚಿನ್ನಾಭರಣ ಖರೀದಿಯ ಬಗ್ಗೆ ಕನ್ನಡದಲ್ಲಿ ಮಾತುಕತೆ ನಡೆಸಿದ್ದಾನೆ. ಈ ವೇಳೆ ಮಾಲಕರು ಹೊರ ಹೋಗಿದ್ದು, ಅವರು ಆಗಮಿಸಿದ ಅನಂತರ ಚಿನ್ನಾಭರಣ ತೋರಿಸುವುದಾಗಿ ಅವರ ಪತ್ನಿ ಹೇಳಿದ್ದಾರೆ.

 

ಗ್ಯಾಲರಿಯಲ್ಲಿ ಒಂದು ಕಟ್ಟಿನಲ್ಲಿ ಇರಿಸಿದ 26 ಗ್ರಾಂ. ಮೌಲ್ಯದ ಚಿನ್ನದ ಉಂಗುರ, ಜುಮ್ಕಿ ಆಭರಣವನ್ನು ಇದ್ದಕಿದ್ದಂತೆ ಆತ ಮಾತಾಡುತ್ತಲೇ ಎತ್ತಿಕೊಂಡಿದ್ದಾನೆ. ಇದನ್ನು ಮುಟ್ಟಬೇಡಿ ಎಂದು ಹೇಳಿ ಆತನ ಕೈಯಿಂದ ವಾಪಸ್‌ ತೆಗೆದುಕೊಳ್ಳುವಷ್ಟರಲ್ಲಿ ಕಳ್ಳ ಕ್ಷಣ ಮಾತ್ರದಲ್ಲಿ ಈ ಬಂಗಾರಗಳನ್ನು ಕದ್ದು ಪರಾರಿಯಾಗಿದ್ದಾನೆ.

 

ಸಿಸಿಟಿವಿಯಲ್ಲಿ ಕೃತ್ಯದ ವೀಡಿಯೋ ದಾಖಲಾಗಿದೆ. ಆರೋಪಿ ಕನ್ನಡ ಭಾಷೆ ಮಾತನಾಡುವವನಾಗಿದ್ದು ಸ್ಕೂಟರ್‌ನಲ್ಲಿ ಆಗಮಿಸಿ ಈ ಕೃತ್ಯ ಎಸಗಿದ್ದಾನೆ. ಇದೀಗ ಕಾರ್ಕಳ ನಗರ ಪೊಲೀಸರು ಕಳ್ಳನ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.