ಮಂಗಳೂರಿನಲ್ಲಿ ನಡೆಯಬೇಕಿದ್ದ ಖ್ಯಾತ ಸಿಂಗರ್ ನ ಡಿಜೆ ಕಾರ್ಯಕ್ರಮ ಕ್ಯಾನ್ಸಲ್..! ಹಿಂದೂ ಸಂಘಟನೆಯ ಖಡಕ್ ಎಚ್ಚರಿಕೆಗೆ ತಲೆಬಾಗಿದ ಪೊಲೀಸ್ ಇಲಾಖೆ..!

  • 28 Dec 2024 05:29:10 PM

ಮಂಗಳೂರು: ಸಂಗೀತ ಮನಸ್ಸಿಗೆ ಹಿತಕರ ಆಹ್ಲಾದವನ್ನು ನೀಡುತ್ತದೆ. ಮನಸ್ಸಿಗೆ ಶಾಂತಿ, ನೆಮ್ಮದಿ ಬೇಕಾದರೆ ಅರ್ಥಗರ್ಭಿತ ಹಾಡುಗಳನ್ನು ಕೇಳುವ ಅಭ್ಯಾಸವೂ ಕೆಲವರಿಗೆ ಇರುತ್ತದೆ. ಆದರೆ ಎಲ್ಲವೂ ಬದಲಾದ ನಮ್ಮ ಸಮಾಜದಲ್ಲಿ ಹಾಡುಗಳೂ ತಮ್ಮ ಗಾತ್ರವನ್ನು ಕಳೆದುಕೊಳ್ಳುತ್ತಿದೆ.

 

ಸಂಗೀತಗಳಲ್ಲೂ ಪಾಶ್ಚಾತ್ಯರ ಸಂಸ್ಕೃತಿ ತಲೆದೋರಿದ್ದು ಈಗೀಗ ಇಂಪಾದ ಹಾಡುಗಳ ಬದಲಿಗೆ ಜನ ಡಿಜೆ ಪದ್ಯಗಳನ್ನೇ ಹೆಚ್ಚು ಇಷ್ಟಪಡ್ತಾರೆ. ಅಂದ ಹಾಗೆ ನೀವು ಪ್ರಖ್ಯಾತ ಸಂಗೀತಗಾರ ಸಜಂಕಾ ಎಂಬವರ ಹೆಸರು ಕೇಳಿರಬಹುದು. ಇದೀಗ ಮಂಗಳೂರಿನಲ್ಲಿ ನಡೆಯಬೇಕಿದ್ದ ಅವರ ಡಿಜೆ ಕಾರ್ಯಕ್ರಮವನ್ನು ಹಿಂದೂ ಸಂಘಟನೆ ರದ್ದುಗೊಳಿಸಿದೆ. 

 

ಹಿಂದೂ ದೇವರನ್ನು ಅವಹೇಳನ ಮಾಡುವ ಗಾಯಕನಿಗೆ ಕರಾವಳಿಯಲ್ಲಿ ವೇದಿಕೆಯಿಲ್ಲ- ಹಿಂದೂ ಸಂಘಟನೆ...!!

 

ಹೌದು. ಮಂಗಳೂರಿನಲ್ಲಿ ನಿನ್ನೆ ಸಂಜೆ ನಡೆಯಬೇಕಿದ್ದ ಇಸ್ರೇಲ್ ಮೂಲದ ಸಜಂಕಾ ಎಂಬ ಸಂಗೀತಗಾರನ ಡಿಜೆ ಕಾರ್ಯಕ್ರಮವನ್ನು ಕೊನೇ ಕ್ಷಣದಲ್ಲಿ ರದ್ದುಗೊಳಿಸಿದೆ. ಈ ಕಾರ್ಯಕ್ರಮಕ್ಕೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಬೃಹತ್ ಪ್ರತಿಭಟನೆಯ ಎಚ್ಚರಿಕೆ ನೀಡಿದ ಬೆನ್ನಲ್ಲೇ ಅನುಮತಿಗೆ ಪೊಲೀಸ್ ಇಲಾಖೆ ನಿರಾಕರಿಸಿದೆ.

 

ಹೊಸ ವರ್ಷದ ಪ್ರಯುಕ್ತ ಮಂಗಳೂರಿನ ಬೋಳಾರದ ಸಿಟಿ ಬೀಚ್ ನಲ್ಲಿ ಸಜಂಕಾ ಡಿಜೆ ಕಾರ್ಯಕ್ರಮ ಏರ್ಪಾಡಾಗಿತ್ತು. ಆದರೆ ಡಿಜೆ ಕುಣಿತದಲ್ಲಿ ಹಿಂದೂ ದೇವರನ್ನು ಅವಮಾನಿಸುತ್ತಾರೆ. ಈ ಕಾರ್ಯಕ್ರಮ ನಡೆಯಲು ನಮ್ಮ ಆಕ್ಷೇಪವಿದೆ. ಇದರಲ್ಲಿ ಹಿಂದೂಗಳ ಪವಿತ್ರವಾದ ನಂಬಿಕೆಗೆ ಧಕ್ಕೆಯುಂಟು ಮಾಡುತ್ತಾರೆ. ಗಾಯತ್ರಿ ಮಂತ್ರ, ವಿಷ್ಣು ಸಹಸ್ರನಾಮ, ಶ್ಲೋಕ, ಮಂತ್ರ ಸೇರಿದಂತೆ ದೇವರ ಭಜನೆಯ ಬಗ್ಗೆ ಇವರು ಲಘುವಾಗಿ ಮಾತನಾಡಿ ನಿಂದಿಸಿ ಧರ್ಮ ವಿರೋಧಿ ಕೃತ್ಯ, ಧರ್ಮ ನಿಂದನೆಯಂತಹ ಕುಕೃತ್ಯಗಳನ್ನು ಎಸಗುತ್ತಾರೆ. ಇದೇ ಅವರ ಕಾರ್ಯಕ್ರಮದ ಮೂಲ ಉದ್ದೇಶ.

 

ಇದಕ್ಕೆ ನಾವು ಆಸ್ಪದ ನೀಡುವುದಿಲ್ಲ. ಈ ಕಾರ್ಯಕ್ರಮಕ್ಕೆ ಮಂಗಳೂರು ಪೊಲೀಸ್ ಆಯುಕ್ತರು ಕೂಡಾ ಅನುಮತಿ ನೀಡಬಾರದೆಂದು ಹಿಂದೂ ಸಂಘಟನೆಯ ಕಾರ್ಯಕರ್ತರು ಮನವಿಯನ್ನು ಕೂಡಾ ಮಾಡಿದ್ದರು. ಹಿಂದೂ ಸಂಘಟನೆಗಳ ತೀವ್ರ ವಿರೋಧದ ಬಳಿಕ ಕೊನೆ ಕ್ಷಣದಲ್ಲಿ ಈ ಕಾರ್ಯಕ್ರಮ ರದ್ದಾಗಿತ್ತು. 

 

ಕಾರ್ಯಕ್ರಮದಲ್ಲಿ ಭಾರೀ ಪ್ರಮಾಣದ ಡ್ರಗ್ ಪೂರೈಕೆ ಬಗ್ಗೆ ಶಂಕೆ..!!

 

ಇನ್ನು ಸಂಪೂರ್ಣವಾಗಿ ಪಾಶ್ಚಾತ್ಯ ಸಂಸ್ಕೃತಿಯಲ್ಲೇ ಕಂಗೊಳಿಸುವ ಈ ಕಾರ್ಯಕ್ರಮದಲ್ಲಿ ಅಮಲು ಪದಾರ್ಥ, ಡ್ರಗ್ಸ್ ಪೂರೈಕೆ ನಡೆಸುವುದರ ಬಗ್ಗೆ ಕೂಡಾ ಹಿಂದೂ ಸಂಘಟನೆಗಳು ಅನುಮಾನ ವ್ಯಕ್ತಪಡಿಸಿತ್ತು. ಅಶ್ಲೀಲವಾಗಿ ಕುಣಿಯುವ ಈ ಕಾರ್ಯಕ್ರಮದಲ್ಲಿ ಸಜಂಕಾ ಹಿಂದೂ ದೇವರ ಅವಹೇಳನ ಮಾಡುತ್ತಾನೆ ಎಂದು ಕೂಡಾ ಗಂಭೀರ ಆರೋಪವೊಂದು ಕೇಳಿಬಂದಿತ್ತು. ಇನ್ನು ಈ ಪ್ರೋಗ್ರಾಮ್ ನ ಟಿಕೆಟ್ ಸೋಲ್ಡ್ ಔಟ್ ಆಗಿತ್ತು.

 

ಸಜಂಕಾ ಕೂಡಾ ಮಂಗಳೂರಿಗೆ ಆಗಮಿಸಿದ್ದು ಸಂಜೆ ವೇಳೆ ಅನುಮತಿ ನೀಡದೆ ಕಾರ್ಯಕ್ರಮವನ್ನು ಕ್ಯಾನ್ಸಲ್ ಮಾಡಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ. ಒಟ್ಟಾರೆಯಾಗಿ ಅರೆಬೆತ್ತಲೆಯಾಗಿ ಕುಣಿದು, ಧರ್ಮವನ್ನು ನಿಂದಿಸುವ ಯಾವುದೇ ಅಥವಾ ಯಾರದ್ದೇ ಕಾರ್ಯಕ್ರಮಕ್ಕೆ ಮಂಗಳೂರಿನಲ್ಲಿ ಅವಕಾಶ ಸಿಗದು ಎಂದು ಮತ್ತೊಮ್ಮೆ ಹಿಂದೂ ಸಂಘಟನೆಗಳು ಎಚ್ಚರಿಸಿದೆ.