ಕಾರವಾರ: ಉತ್ತರ ಕನ್ನಡದ ಪ್ರಮುಖ ಪ್ರವಾಸಿಗರ ತಾಣವಾದ ಮುರುಡೇಶ್ವರ ಬೀಚ್ 19 ದಿನಗಳ ಬಳಿಕ ಮತ್ತೆ ಸಹಜ ಸ್ಥಿತಿಗೆ ಮರಳಿದೆ. ಇಂದಿನಿಂದ ಜಲಕ್ರೀಡೆಗೆ ಜಿಲ್ಲಾಡಳಿತವು ಅನುಮತಿಯನ್ನು ನೀಡಿದೆ. ಈಶ್ವರನ ದರ್ಶನದ ಜೊತೆಗೆ ಸಮುದ್ರ ಕಿನಾರೆಯಲ್ಲಿ ಈಜಾಡಿ ಮೋಜು ಮಾಡಲು ಆಗುವುದು ಇಲ್ಲಿನ ವಿಶೇಷತೆ.
ಜಿಲ್ಲಾಡಳಿತವು ಬೀಚ್ ಪ್ರದೇಶವನ್ನು ಡೇಂಜರ್ ಜೋನ್ ಮತ್ತು ಸೇಫ್ ಜೋನ್ ಎಂದು ವಿಭಾಗಿಸಿ ಸುರಕ್ಷಿತ ಪ್ರದೇಶದಲ್ಲಿ ಪ್ರವಾಸಿಗರು ಈಜಾಡಲು ಅವಕಾಶವನ್ನು ನೀಡಿರುತ್ತದೆ.
ಇಲ್ಲಿ ಇತೀಚೆಗೆ ನಡೆದ ಘಟನೆಗಳು ಪ್ರವಾಸಿಗರ ಮನಸ್ಸಿನಲ್ಲಿ ಆಘಾತವನ್ನು ಉಂಟುಮಾಡಿತ್ತು. ಕಳೆದ 19 ದಿನಗಳ ಹಿಂದೆ ಶಾಲಾ ಪ್ರವಾಸಕ್ಕೆ ಬಂದ ನಾಲ್ವರು ಕೋಲಾರ ಮೂಲದ ವಿದ್ಯಾರ್ಥಿನಿಯರು ಸಮುದ್ರದ ಸಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದು, ಕಡಲತೀರದಲ್ಲಿ ಸೂತಕದ ವಾತಾವರಣವನ್ನು ಸೃಷ್ಟಿ ಮಾಡಿತ್ತು. ಈ ದುರ್ಘಟನೆಯ ಬಳಿಕ ಬೀಚ್ ಪ್ರವಾಸಿಗರಿಗೆ ಮುಚ್ಚಲಾಗಿತ್ತು. ಆದರೆ ಇದೀಗ ಜಿಲ್ಲಾಡಳಿತ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಮತ್ತೆ ಪುನಃ ಬೀಚನ್ನು ಪ್ರವಾಸಿಗರಿಗಾಗಿ ತೆರೆಯಲಾಗಿದೆ.
ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ ಹೇರಲಾಗಿದ್ದರಿಂದ ವ್ಯಾಪಾರಸ್ಥರಿಗೆ ಆರ್ಥಿಕ ನಷ್ಟ ಸಂಭವಿಸಿತ್ತು ಆದರೆ ಈ ಸುದ್ದಿಯು ಸ್ಥಳೀಯ ವ್ಯಾಪಾರಿಗಳಿಗೆ ಸಂತೋಷವನ್ನುಂಟು ಮಾಡಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಈಗ, ಬೀಚ್ ಪುನಾರಂಭದಿಂದ ಪ್ರವಾಸಿಗರ ಹಿಂಡು ಬೀಚ್ ಕಡೆಗೆ ಹರಿಯುವ ನಿರೀಕ್ಷೆಯಿದೆ. ಇನ್ನು ಬೀಚ್ ಪ್ರವಾಸಿಗರು ಜಿಲ್ಲಾಡಳಿತದ ಮಾರ್ಗಸೂಚಿಗಳನ್ನು ಅನುಸರಿಸುದರ ಮೂಲಕ ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕು.